ಪ್ಯಾರಿಸ್, ಜು. 19(DaijiworldNews/AA): ಸಿಗರೇಟ್ ಸೇದಿದ ಕಾರಣಕ್ಕಾಗಿ ಜಪಾನ್ ಮಹಿಳಾ ಆರ್ಟಿಸ್ಟಿಕ್ ಜಿಮ್ನಾಸ್ಟಿಕ್ಸ್ ತಂಡದ ನಾಯಕಿ ಒಲಿಂಪಿಕ್ಸ್ ಸ್ಪರ್ಧೆಯ ಅವಕಾಶ ಕಳೆದುಕೊಂಡಿದ್ದಾರೆ.
ಹೌದು ಒಲಿಂಪಿಕ್ಸ್ ನಲ್ಲಿ ಪಾಲ್ಗೊಳ್ಳುವ ಅಥ್ಲೀಟ್ ಗಳಿಗೆ ಕೆಲವು ನಿಯಮಗಳನ್ನು ಹೇಳಲಾಗುತ್ತದೆ. ಒಂದು ವೇಳೆ ಈ ನಿಯಮಗಳನ್ನು ಉಲ್ಲಂಘಿಸುವ ಕ್ರೀಡಾಪಟುಗಳು ಸ್ಪರ್ಧಿಸುವ ಅವಕಾಶ ಕಳೆದುಕೊಳ್ಳುತ್ತಾರೆ. ಹೀಗೆಯೇ ಜಪಾನ್ ಮಹಿಳಾ ಆರ್ಟಿಸ್ಟಿಕ್ ಜಿಮ್ನಾಸ್ಟಿಕ್ಸ್ ತಂಡದ ನಾಯಕಿ ಶೋಕೊ ಮಿಯಾಟಾ ಅವರು ಒಲಿಂಪಿಕ್ಸ್ ಕ್ರೀಡಾ ಕೂಟದ ನಿಯಮವನ್ನು ಉಲ್ಲಂಘಿಸಿ ಸಿಗರೇಟ್ ಸೇದಿದ್ದರು. ಹೀಗಾಗಿ ಅವರು ಪ್ಯಾರಿಸ್ ಒಲಿಂಪಿಕ್ಸ್ ನಲ್ಲಿ ಸ್ಪರ್ಧಿಸುವ ಅವಕಾಶವನ್ನು ಕಳೆದುಕೊಂಡಿದ್ದಾರೆ.
ಇನ್ನು ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಜಪಾನಿನ ಜಿಮ್ನಾಸ್ಟಿಕ್ಸ್ ಅಸೋಸಿಯೇಷನ್, ಶೋಕೊ ಮಿಯಾಟಾ ಅವರು ನಿಯಮವನ್ನು ಉಲ್ಲಂಘಿಸಿ ಸಿಗರೇಟ್ ಸೇದಿದ್ದರು. ಹೀಗಾಗಿ ಅವರನ್ನು ವಾಪಸ್ ಕಳುಹಿಸಲಾಗಿದೆ. ಜಪಾನ್ ನ ಮಹಿಳಾ ತಂಡವು 5 ಕ್ರೀಡಾಪಟುಗಳ ಬದಲು 4 ಕ್ರೀಡಾಪಟುಗಳೊಂದಿಗೆ ಸ್ಪರ್ಧಿಸಲಿದೆ ಎಂದು ಹೇಳಿದೆ.
ಮೊನಾಕೊದಲ್ಲಿನ ತಂಡದ ತರಬೇತಿ ಶಿಬಿರದಿಂದ ಮಿಯಾಟಾ ಅವರನ್ನು ಹೊರಕ್ಕೆ ಕಳುಹಿಸಲಾಗಿದ್ದು, ಗುರುವಾರ ಅವರು ಜಪಾನ್ ಗೆ ಆಗಮಿಸಲಿದ್ದು ತನಿಖೆ ಎದುರಿಸಲಿದ್ದಾರೆ ಎಂದು ಜೆಜಿಎ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಇನ್ನು 'ಘಟನೆಯ ಬಗ್ಗೆ ನಾವು ನಮ್ಮ ಹೃದಯದಾಳದಿಂದ ಕ್ಷಮೆಯಾಚಿಸುತ್ತೇವೆ' ಎಂದು ಅನೇಕ ಅಧಿಕಾರಿಗಳು ತಿಳಿಸಿದ್ದಾರೆ.