ಬೆಂಗಳೂರು, ಜು. 17(DaijiworldNews/AA): ಟೀಂ ಇಂಡಿಯಾದ ಸ್ಟಾರ್ ಆಟಗಾರ, ಕನ್ನಡಿಗ ಕೆ.ಎಲ್ ರಾಹುಲ್ ಮುಂದಿನ ಆವೃತ್ತಿಯ ಐಪಿಎಲ್ ನಲ್ಲಿ ಆರ್ಸಿಬಿ ತಂಡದ ಪರ ಆಡುವುದು ಬಹುತೇಖ ಖಚಿತ ಎಂದು ಹೇಳಲಾಗುತ್ತಿದೆ.
ಕೆ. ಎಲ್. ರಾಹುಲ್ ಅವರು ಲಕ್ನೋ ತಂಡ ತೊರೆಯಲಿದ್ದಾರೆ ಎಂಬ ಸುಳಿವನ್ನು ಲಕ್ನೋ ತಂಡದ ಸಹ ಆಟಗಾರ ಅಮೀತ್ ಮಿಶ್ರಾ ನೀಡಿದ್ದರು. ಇನ್ನು ಲಕ್ನೋ ತಂಡದ ಮಾಲಿಕ ಗೋಯೆಂಕಾ ತೋರಿದ್ದ ವರ್ತನೆಯಿಂದಾಗಿ ಕೆ.ಎಲ್. ರಾಹುಲ್ ಗೆ ಬೇಸರವಾಗಿದ್ದು, ಮುಂದಿನ ಆವೃತ್ತಿಯಲ್ಲಿ ಈ ತಂಡದ ಪರ ಆಡುವುದು ಅನುಮಾನ ಎನ್ನಲಾಗುತ್ತಿದೆ.
ಕೆ.ಎಲ್ ರಾಹುಲ್ ಅವರು ಕೂಡ ಆರ್ ಸಿಬಿ ಪರ ಆಡಬೇಕೆಂಬ ಬಯಕೆಯನ್ನು ಈ ಹಿಂದೆಯೇ ವ್ಯಕ್ತಪಡಿಸಿದ್ದರು. ಆರ್.ಅಶ್ವಿನ್ ಜೊತೆಗಿನ ಕಾರ್ಯಕ್ರಮವೊಂದರಲ್ಲಿ ಭಾಗಿಯಾಗಿದ್ದ ರಾಹುಲ್, 2013ರಲ್ಲಿ ವಿರಾಟ್ ಕೊಹ್ಲಿ ಅವರು ನನ್ನನ್ನು ಆರ್ಸಿಬಿ ತಂಡಕ್ಕೆ ಸೇರಿಸಿಕೊಂಡರು. ನಾನು ಆರ್ ಸಿಬಿ ತಂಡದಲ್ಲಿ ಆಡಲು ಇಷ್ಟಪಡುತ್ತೇನೆ. ನಾನು ಆರ್ಸಿಬಿ ತಂಡದಿಂದಲೇ ನನ್ನ ಪಯಣವನ್ನು ಆರಂಭಿಸಿದ್ದೆ. ಹಾಗಾಗಿ ಅಲ್ಲಿಯೇ ನನ್ನ ಪಯಣವನ್ನು ಅಂತ್ಯಗೊಳಿಸಲು ಬಯಸುತ್ತೇನೆ ಎಂದಿದ್ದರು.
ಇನ್ನು ಕೆ.ಎಲ್ ರಾಹುಲ್ ಅವರು ಆರ್ ಸಿಬಿ ತಂಡಕ್ಕೆ ಮರಳುತ್ತಾರೆ ಎಂಬ ಸುದ್ದಿ ವೈರಲ್ ಆಗುತ್ತಿದ್ದಂತೆ ಕೆ.ಎಲ್ ರಾಹುಲ್ ಅವರ ಅಭಿಮಾನಿಗಳು, ಆರ್ ಸಿಬಿಯ ಅಭಿಮಾನಿಗಳು ಆರ್ ಸಿಬಿ ಜೆರ್ಸಿಯಲ್ಲಿ ರಾಹುಲ್ ಅವರ ಫೋಟೊ ಎಡಿಟ್ ಮಾಡಿ ತವರಿಗೆ ಸ್ವಾಗತ ಎನ್ನುವ ಪೋಸ್ಟರ್ ಅನ್ನು ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡಲು ಪ್ರಾರಂಭಿಸಿದ್ದಾರೆ.