ಹರಾರೆ, ಜು.05(DaijiworldNews/AA): ನಾಳೆಯಿಂದ ಭಾರತ ಮತ್ತು ಜಿಂಬಾಬ್ವೆ ನಡುವಿನ ಟಿ20 ಸರಣಿ ಆರಂಭಗೊಳ್ಳಲಿದ್ದು, ಈ ಸರಣಿಯ ಮೊದಲ ಪಂದ್ಯವು ಹರಾರೆಯಲ್ಲಿ ನಡೆಯಲಿದೆ. ಶುಭಮನ್ ಗಿಲ್ ನಾಯಕತ್ವದಲ್ಲಿ ಟೀಂ ಇಂಡಿಯಾ ಹೇಗೆ ಪ್ರದರ್ಶನ ನೀಡಲಿದೆ ಎಂಬ ಕುತೂಹಲ ಮೂಡಿದೆ.
ಈಗಾಗಲೇ ರೋಹಿತ್ ಶರ್ಮ, ವಿರಾಟ್ ಕೊಹ್ಲಿ ಮತ್ತು ರವೀಂದ್ರ ಜಡೇಜಾ ಟಿ20 ಕ್ರಿಕೆಟ್ಗೆ ವಿದಾಯ ಹೇಳಿದ್ದಾರೆ. ಹೀಗಾಗಿ ಮುಂದಿನ ವರ್ಷ ನಡೆಯಲಿರುವ ಐಸಿಸಿ ಚಾಂಪಿಯನ್ಸ್ ಹಾಗೂ 2026ರಲ್ಲಿ ನಡೆಯಲಿರುವ ಟಿ20 ವಿಶ್ವಕಪ್ ಗೆ ತಂಡವನ್ನು ರಚಿಸಲು ಬಿಸಿಸಿಐ ಸಿದ್ಧತೆ ಆರಂಭಿಸಿದೆ. ಈ ಹಿನ್ನೆಲೆ ಭಾರತ-ಜಿಂಬಾಬ್ವೆ ಟಿ20 ಸರಣಿಯಲ್ಲಿ ದೊರೆತ ಅವಕಾಶವನ್ನು ಯುವ ಆಟಗಾರರು ಸರಿಯಾಗಿ ಬಳಸಿಕೊಂಡರೆ ಭಾರತ ಸೀನಿಯರ್ ತಂಡದಲ್ಲಿ ಆಡುವ ಅವಕಾಶವಿದೆ.
ರೋಹಿತ್ ವಿದಾಯದ ಬಳಿಕ ಟಿ20 ತಂಡದ ನಾಯಕತ್ವಕ್ಕೆ ಈಗಾಗಲೇ ಹಾರ್ದಿಕ್ ಪಾಂಡ್ಯ ಹೆಸರು ಕೇಳಿ ಬಂದಿದೆ. ಜಿಂಬಾಬ್ವೆ ಸರಣಿಯಲ್ಲಿ ತಂಡ ಮುನ್ನಡೆಸುತ್ತಿರುವ ಶುಭಮನ್ ಗಿಲ್ ಈ ಸರಣಿಯಲ್ಲಿ ಉತ್ತಮ ಪ್ರದರ್ಶನ ತೋರಿದರೆ ಮುಂದಿನ ದಿನದಲ್ಲಿ ನಾಯಕನಾಗುವ ಸಾಧ್ಯತೆಯೂ ಇದೆ. ಇನ್ನು ಈ ಬಾರಿಯ ಐಪಿಎಲ್ನಲ್ಲಿಉತ್ತಮ ಪ್ರದರ್ಶನ ತೋರಿದ್ದ ಎಡಗೈ ಬ್ಯಾಟರ್ ಅಭಿಷೇಕ್ ಶರ್ಮ ಮೇಲೆಯೂ ಬಹಳ ನಿರೀಕ್ಷೆ ಇದೆ. ಒಟ್ಟಾರೆ ಈ ಸರಣಿಯು ಯುವ ಆಟಗಾರರ ಮುಂದಿನ ಕ್ರಿಕೆಟ್ ಭವಿಷ್ಯವನ್ನು ನಿರ್ಧಾರ ಮಾಡಲಿದೆ.