ದೆಹಲಿ, ಜೂ 01(DaijiworldNews/AA): ಟೀಂ ಇಂಡಿಯಾದ ಮುಖ್ಯ ಕೋಚ್ ಹುದ್ದೆಗೆ ಗೌತಮ್ ಗಂಭೀರ್ ಸೂಕ್ತ ಎಂದು ಸೌರವ್ ಗಂಗೂಲಿ ಹೇಳಿದ್ದಾರೆ.
ಫ್ರಾಂಚೈಸಿಯ ತಂಡದ ಮಾರ್ಗದರ್ಶಕರಾಗಿರುವುದು ಮತ್ತು ಉನ್ನತ ಮಟ್ಟದ ಅಂತರರಾಷ್ಟ್ರೀಯ ತಂಡಕ್ಕೆ ತರಬೇತಿ ನೀಡುವುದರ ನಡುವೆ ಸಾಕಷ್ಟು ವ್ಯತ್ಯಾಸವಿದೆ. ಗಂಭೀರ್ಗೆ ಇದೆಲ್ಲವೂ ಚೆನ್ನಾಗಿ ತಿಳಿದಿರುತ್ತದೆ. ವಿರಾಟ್ ಮತ್ತು ರೋಹಿತ್ನಂತಹ ಆಟಗಾರರನ್ನು ಹೇಗೆ ನಿಭಾಯಿಸಬೇಕು ಎಂದು ಕೂಡ ತಿಳಿದಿರುತ್ತದೆ. ಅವರು ಟೀಂ ಇಂಡಿಯಾದ ಕೋಚ್ ಆದರೆ ತಂಡಕ್ಕೆ ಚೆನ್ನಾಗಿ ಹೊಂದಿಕೊಳ್ಳುತ್ತಾರೆ ಎಂದು ಅವರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಆದರೆ ಕೆಲ ದಿನಗಳ ಹಿಂದೆ ಗಂಗೂಲಿ ಅವರು ಗಂಭೀರ್ ಕೋಚ್ ಆಗುವ ಬಗ್ಗೆ ಲೇವಡಿ ಮಾಡಿ ಎಕ್ಸ್ ನಲ್ಲಿ ಪೋಸ್ಟ್ ಒಂದನ್ನು ಮಾಡಿದ್ದರು. ಈ ಪೋಸ್ಟ್ ನಲ್ಲಿ ಅವರು, ಆಟಗಾರನ ಜೀವನದಲ್ಲಿ ಕೋಚ್ನ ಪ್ರಾಮುಖ್ಯತೆ ಬಹಳ ಮುಖ್ಯ. ತರಬೇತುದಾರನ ಮಾರ್ಗದರ್ಶನ ಮತ್ತು ನಿರಂತರ ತರಬೇತಿಯು ಯಾವುದೇ ಆಟಗಾರನ ವೃತ್ತಿಜೀವನವನ್ನು ರೂಪಿಸುತ್ತದೆ. ಮುಖ್ಯ ಕೋಚ್ ಮೈದಾನದಿಂದ ದೂರ ಉಳಿದಿದ್ದರೂ, ಅವರ ಕೊಡುಗೆ ಮೈದಾನದೊಳಗೆ ಬಹಳ ಮುಖ್ಯವಾಗಿರುತ್ತದೆ. ಇಂತಹ ಪರಿಸ್ಥಿತಿಯಲ್ಲಿ ಭಾರತ ತಂಡಕ್ಕೆ ಮುಖ್ಯ ಕೋಚ್ನನ್ನೂ ಬುದ್ಧಿವಂತಿಕೆಯಿಂದ ಆಯ್ಕೆ ಮಾಡಬೇಕಾಗುತ್ತದೆ ಎಂದು ತಿಳಿಸಿದ್ದರು.
ಗಂಗೂಲಿ ಅವರು ಈ ಪೋಸ್ಟ್ ಮಾಡಿದ ಬಳಿಕ ಅಭಿಮಾನಿಗಳು ಗೌತಮ್ ಗಂಭೀರ್ ಅವರನ್ನು ಟೀಂ ಇಂಡಿಯಾದ ಮುಖ್ಯ ಕೋಚ್ ಮಾಡಬಾರದು ಎಂಬುದು ಗಂಗೂಲಿ ಅವರ ಅಭಿಪ್ರಾಯವಾಗಿರಬಹುದು ಎಂದುಕೊಂಡಿದ್ದರು. ಆದರೀಗ ಗಂಗೂಲಿ ಅವರ ಈ ಹೇಳಿಕೆ ಭಾರೀ ಕುತೂಹಲ ಮೂಡಿಸಿದೆ.