ಟೋಕಿಯೊ, ಮೇ 20(DaijiworldNews/AK):ಜಪಾನ್ನ ಕೊಬೆಯಲ್ಲಿ ನಡೆಯುತ್ತಿರುವ ವಿಶ್ವ ಪ್ಯಾರಾ ಅಥ್ಲೆಟಿಕ್ಸ್ ಚಾಂಪಿಯನ್ಶಿಪ್ನ ಮಹಿಳೆಯರ 400 ಮೀಟರ್ ಟಿ20 ವಿಭಾಗದ ಓಟದಲ್ಲಿ ಭಾರತದ ದೀಪ್ತಿ ಜೀವನಜಿ ವಿಶ್ವದಾಖಲೆಯೊಂದಿಗೆ ಚಿನ್ನದ ಪದಕ ಗೆದ್ದ ಸಾಧನೆ ಮಾಡಿದ್ದಾರೆ.
21 ವರ್ಷದ ಓಟಗಾರ್ತಿ ದೀಪ್ತಿ 55.07 ಸೆಕೆಂಡುಗಳಲ್ಲಿ ಗುರಿ ಸಾಧಿಸುವ ಮೂಲಕ ಚಿನ್ನವನ್ನು ಮುಡಿಗೇರಿಸಿಕೊಂಡಿದ್ದಾರೆ. ಇನ್ನೂ ಟರ್ಕಿಯ ಐಸೆಲ್ ಒಂಡರ್ 55.19 ಸೆಕೆಂಡುಗಳಲ್ಲಿ ಓಟ ಪೂರೈಸಿ ಬೆಳ್ಳಿ ಗೆದ್ದರೆ, ಈಕ್ವೆಡಾರ್ನ ಲಿಜಾನ್ಶೆಲಾ ಅಂಗುಲೋ 56.68 ಸೆಕೆಂಡುಗಳಲ್ಲಿ ಓಡಿ ಕಂಚಿನ ಪದಕ ತಮ್ಮದಾಗಿಸಿಕೊಂಡರು.
ಕಳೆದ ವರ್ಷ ಪ್ಯಾರಿಸ್ನಲ್ಲಿ ನಡೆದ ಚಾಂಪಿಯನ್ಶಿಪ್ ಸ್ಪರ್ಧೆಯಲ್ಲಿ ಅಮೆರಿಕದ ಬ್ರೆನ್ನಾ ಕ್ಲಾರ್ಕ್ 55.12 ಸೆಕೆಂಡುಗಳಲ್ಲಿ ʻಚಿನ್ನʼ ಓಟ ಪೂರೈಸಿದ್ದು ಈವರೆಗಿನ ದಾಖಲೆಯಾಗಿತ್ತು.
ತೆಲಂಗಾಣದ ವಾರಂಗಲ್ನ ಜಿಲ್ಲೆಯ ಕಲ್ಲಡಾ ಗ್ರಾಮದ ದೀಪ್ತಿ ಜೀವನಜಿ ಮೂಲತಃ ಕೂಲಿ ಕಾರ್ಮಿಕ ಕುಟುಂಬದಿಂದ ಬಂದವರು. ಕಳೆದ ವರ್ಷ ಏಷ್ಯನ್ ಪ್ಯಾರಾ ಕ್ರೀಡಾಕೂಟದ ಟಿ20 400 ಮೀಟರ್ ಓಟ ವಿಭಾಗದಲ್ಲಿ 52.69 ಸೆಕೆಂಡುಗಳಲ್ಲೇ ತಮ್ಮ ಓಟ ಪೂರೈಸಿ ಏಷ್ಯನ್ ದಾಖಲೆಯೊಂದಿಗೆ ಚಿನ್ನ ಗೆದ್ದಿದ್ದರು.