ಪ್ಯಾರಿಸ್ , ಏ. 23(DaijiworldNews/AK):ಕ್ರೀಡೆಗಳ ಮಹಾಸಂಗಮ ಒಲಿಂಪಿಕ್ಸ್ (Olympics 2024) ಈ ಬಾರಿ ಫ್ರಾನ್ಸ್ನ ರಾಜಧಾನಿ ಪ್ಯಾರಿಸ್ನಲ್ಲಿ (Paris) ನಡೆಯಲಿದೆ. ಮುಂದಿನ ಜುಲೈ 26 ರಂದು ಉದ್ಘಾಟನೆಯಾಗಲಿದ್ದು, ಆಗಸ್ಟ್ 11ರಂದು ತೆರೆ ಬೀಳಲಿದೆ.
ಈ ಬಾರಿ ಒಲಿಂಪಿಕ್ಸ್ ಉದ್ಘಾಟನಾ ಸಮಾರಂಭ ವಿಭಿನ್ನವಾಗಿರಲಿದೆ. ಪ್ರತಿ ವರ್ಷ ಒಲಿಂಪಿಕ್ಸ್ನಲ್ಲಿ ಪಾಲ್ಗೊಳ್ಳುವ ದೇಶಗಳ ಅಥ್ಲೀಟ್ಗಳು ಕ್ರೀಡಾಂಗಣದಲ್ಲಿ ಪಥಸಂಚಲನದ ಮೂಲಕ ಸಾಗಿ ಸಮಾವೇಶಗೊಳ್ಳುವುದು ಸಂಪ್ರದಾಯ. ಆದ್ರೆ ಈ ಬಾರಿ ಸಾವಿರಾರು ಅಥ್ಲೀಟ್ಗಳು ಸೇನ್ ನದಿಯಲ್ಲಿ (Seine River) ದೋಣಿಗಳ ಮುಖಾಂತರ ಐಫೆಲ್ ಟವರ್ ದಿಕ್ಕಿನತ್ತ ಕೆಲವು ಮೈಲುಗಳ ದೂರ ಕ್ರಮಿಸಲಿದ್ದಾರೆ.
206 ರಾಷ್ಟ್ರಗಳಿಂದ ಒಟ್ಟು 10,500 ಕ್ರೀಡಾಪಟುಗಳು ಪಾಲ್ಗೊಳ್ಳಲಿದ್ದಾರೆ. ಈಗಾಗಲೇ ಕ್ರೀಡಾಜ್ಯೋತಿ ಸಹ ಬೆಳಗಿಸಲಾಗಿದೆ. ಉದ್ಘಾಟನೆಯ ರೋಚಕ ಕ್ಷಣವನ್ನು ಸೇನ್ ನದಿಯ ಎರಡೂ ಬದಿಗಳಲ್ಲಿ ನಿಂತು ವೀಕ್ಷಿಸಲು ಸುಮಾರು 6,000 ಕ್ರೀಡಾಭಿಮಾನಿಗಳಿಗೆ ಅವಕಾಶ ಮಾಡಿಕೊಡಲಾಗಿತ್ತು. ಆದ್ರೆ ವಿವಿಧ ಭದ್ರತಾ ಕಾರಣಗಳಿಂದ 3 ಲಕ್ಷ ಮಂದಿಗೆ ಮಾತ್ರ ಕ್ರೀಡಾಕೂಟ ವೀಕ್ಷಣೆಗೆ ಅವಕಾಶ ಮಾಡಿಕೊಡಲಾಗಿದೆ.
ಒಟ್ಟು 35 ಸ್ಥಳಗಳಲ್ಲಿ ಕ್ರೀಡಾಕೂಟ ನಡೆಯಲಿದ್ದು, 10,500 ಕ್ರೀಡಾಪಟುಗಳು ವಿವಿಧ ಸ್ಪರ್ಧೆಗಳಲ್ಲಿ ಕಾದಾಟ ನಡೆಸಲಿದ್ದಾರೆ. ಕ್ರೀಡಾ ಗ್ರಾಮದಲ್ಲಿ ಪ್ರತಿದಿನ 6 ಲಕ್ಷಕ್ಕೂ ಅಧಿಕ ಮಂದಿಗೆ ಊಟದ ವ್ಯವಸ್ಥೆಯಿರಲಿದೆ. ಊಟದ ವ್ಯವಸ್ಥೆ ನಿರ್ವಹಣೆ ಮಾಡುವುದಕ್ಕಾಗಿಯೇ 31,500 ಸ್ವಯಂ ಸೇವಕರನ್ನು ನೇಮಕ ಮಾಡಿಕೊಳ್ಳಲಾಗಿದೆ.