ಮುಂಬೈ, ಏ. 13(DaijiworldNews/AA): ಐಪಿಎಲ್ ನ ಯಶಸ್ವಿ ನಾಯಕ, ಹಿಟ್ ಮ್ಯಾನ್ ರೋಹಿತ್ ಶರ್ಮಾ ಅವರನ್ನು ಮುಂಬೈ ಫ್ರಾಂಚೈಸಿ ಏಕಾಏಕಿ ನಾಯಕತ್ವದಿಂದ ಕೆಳಗಿಳಿಸಿ, ಹಾರ್ದಿಕ್ ಪಾಂಡ್ಯರನ್ನು ನಾಯಕನನ್ನಾಗಿ ಮಾಡಿತ್ತು. ಹೀಗಾಗಿ ಸಹಜವಾಗಿಯೇ ಈ ಬಾರಿಯ ಐಪಿಎಲ್ ಆರಂಭದಿಂದಲೂ ಆಕ್ರೋಶ ವ್ಯಕ್ತವಾಗುತ್ತಿದೆ.
ಇದೀಗ ಈ ಬಗ್ಗೆ ಪ್ರತಿಕ್ರಿಯೆ ನೀಡಿದ ಇಂಗ್ಲೆಂಡ್ ತಂಡದ ಮಾಜಿ ನಾಯಕ ಮೈಕೆಲ್ ವಾನ್ ಅವರು, ಮುಂಬೈ ಫ್ರಾಂಚೈಸಿ ರೋಹಿತ್ ಅವರಿಂದ ನಾಯಕತ್ವವನ್ನು ಕಿತ್ತು ಹಾರ್ದಿಕ್ ಪಾಂಡ್ಯಗೆ ಹಸ್ತಾಂತರಿಸಿದ್ದು, ಇದು ಸರಿಯಾದ ನಿರ್ಧಾರವಲ್ಲ. ಹೀಗಾಗಿ ಮೆಗಾ ಹರಾಜಿಗೂ ಮುನ್ನ ರೋಹಿತ್ ಶರ್ಮಾ ಮುಂಬೈ ಇಂಡಿಯನ್ಸ್ ಗೆ ವಿದಾಯ ಹೇಳಬಹುದು. ರೋಹಿತ್ ಶರ್ಮಾ ಮುಂಬೈ ಫ್ರಾಂಚೈಸಿಯನ್ನು ತೊರೆದರೆ ಚೆನ್ನೈ ಸೂಪರ್ ಕಿಂಗ್ಸ್ ನ ಜೆರ್ಸಿಯಲ್ಲಿ ಆಡುವುದನ್ನು ನಾನು ನೋಡಬಹುದು ಎಂದು ತಿಳಿಸಿದ್ದಾರೆ.
ರೋಹಿತ್ ಶರ್ಮಾ ಅವರಿಂದ ನಾಯಕತ್ವವನ್ನು ಕಿತ್ತುಕೊಂಡಿರುವುದು ತಪ್ಪು. ರೋಹಿತ್ ಶರ್ಮಾ ಇನ್ನೂ 2 ಸೀಸನ್ ಗಳ ಕಾಲ ನಾಯಕನಾಗಿ ಉಳಿಯಬೇಕಿತ್ತು ಎಂದಿದ್ದಾರೆ. ಒಟ್ಟಾರೆ ಮೈಕೆಲ್ ವಾನ್ ಅವರು ನೀಡಿರುವ ಈ ಹೇಳಿಕೆ ಎಷ್ಟರ ಮಟ್ಟಿಗೆ ನಿಜವಾಗುತ್ತದೆ ಎಂದು ಕಾದುನೋಡಬೇಕಿದೆ.