ಮುಂಬಯಿ, ಏ 10 (DaijiworldNews/AK): ಸತತ ಸೋಲಿನಿಂದ ಕಂಗೆಟ್ಟಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ನಾಳೆ ಗುರುವಾರದ ಐಪಿಎಲ್(IPL 2024) ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ವಿರುದ್ಧ ಅದೃಷ್ಟ ಪರೀಕ್ಷೆಗೆ ಇಳಿಯಲಿದ್ದಾರೆ. ಈ ಪಂದ್ಯವನ್ನಾದರೂ ಆರ್ಸಿಬಿ ಗೆಲ್ಲಲಿ ಎನ್ನುವುದು ಅಭಿಮಾನಿಗಳ ಒಕ್ಕೊರಲಿನ ಹಾರೈಕೆಯಾಗಿದೆ.
ಆರಂಭದಲ್ಲಿ ಮೂರು ಪಂದ್ಯದಲ್ಲಿ ಸೋಲುಂಡ ಹಾರ್ದಿಕ್ ಪಾಂಡ್ಯ ಸಾರಥ್ಯದ ಮುಂಬೈ ಇಂಡಿಯನ್ಸ್ ತಂಡ ಗೆಲುವು ಕಂಡರುವುದು ತವರಿನ ಪಂದ್ಯದಲ್ಲಿ. ಹೀಗಾಗಿ ಮುಂಬೈ ತವರಿನಲ್ಲಿ ತಂಡ ಬಲಿಷ್ಠವಾಗಿದೆ. ಗಾಯದಿಂದ ಚೇತರಿಕೆ ಕಂಡು ಡೆಲ್ಲಿ ವಿರುದ್ಧ ಆಡಲಿಳಿದಿದ್ದ ಹಾರ್ಡ್ ಹಿಟ್ಟರ್ ಸೂರ್ಯಕುಮಾರ್ ಶೂನ್ಯಕ್ಕೆ ವಿಕೆಟ್ ಒಪ್ಪಿಸಿದ್ದರು. ಇದೀಗ ಆರ್ಸಿಬಿ ವಿರುದ್ಧದ ಪಂದ್ಯದಲ್ಲಿ ಉತ್ತಮ ಪ್ರದರ್ಶನ ನೀಡುವ ವಿಶ್ವಾಸದಲ್ಲಿದ್ದಾರೆ.
ಸತತ ಸೋತ ಆರ್ಸಿಬಿ ತಂಡದಲ್ಲಿ ಆಟಗಾರರ ಬದಲಾವಣೆ ಮಾಡಬೇಕು ಎನ್ನುವ ಕೂಗು ಅಭಿಮಾನಿಗಳಿಂದಲೇ ಕೇಳಿ ಬರುತ್ತಿದೆ. ಹೀಗಾಗಿ ಈ ಪಂದ್ಯದಲ್ಲಿ ಆರ್ಸಿಬಿ ಆಡುವ ಬಳಗದಲ್ಲಿ ಕೆಲವು ಬದಲಾವಣೆ ಮಾಡುವ ಸಾಧ್ಯತೆ ಇದೆ.
ಆಡಿದ 5 ಪಂದ್ಯಗಳ ಪೈಕಿ 4 ಪಂದ್ಯದಲ್ಲಿ ವಿರಾಟ್ ಕೊಹ್ಲಿ ಮಾತ್ರ ತಂಡಕ್ಕೆ ನೆರವಾಗಿದ್ದು. ಉಳಿದ ಯಾವುದೇ ಆಟಗಾರನು ಕೂಡ ನಿರೀಕ್ಷಿತ ಮಟ್ಟದ ಪ್ರದರ್ಶನ ತೋರುವಲ್ಲಿ ಯಶಸ್ಸು ಕಂಡಿಲ್ಲ. ಐಪಿಎಲ್ನ ಬದ್ಧ ಎದುರಾಳಿಗಳೆಂದು ಕರೆಯಲ್ಪಡುವ ಮುಂಬೈ ಮತ್ತು ಬೆಂಗಳೂರು ಇದುವರೆಗೆ 32 ಐಪಿಎಲ್ ಪಂದ್ಯಗಳನ್ನು ಆಡಿದೆ. ಆರ್ಸಿಬಿ ಈ ಪೈಕಿ 14 ಮತ್ತು ಮುಂಬೈ 18 ಪಂದ್ಯಗಳನ್ನು ಗೆದ್ದಿದೆ. ಆರ್ಸಿಬಿ ತಂಡ ಮುಂಬೈ ವಿರುದ್ಧ ಗಳಿಸಿದ ಇದುವರೆಗಿನ ಗರಿಷ್ಠ ಮೊತ್ತ 235 ಆಗಿದೆ, ಮತ್ತು ಆರ್ಸಿಬಿ ವಿರುದ್ಧ ಮುಂಬೈನ ಅತ್ಯಧಿಕ ಸ್ಕೋರ್ 213 ಆಗಿದೆ.