ಮುಂಬೈ, ಏ 09 (DaijiworldNews/AK):ಐಪಿಎಲ್ ೨೦೨೪ ಸರಣಿಯ 17 ರಲ್ಲಿ ಟಾಪ್ ರನ್ ಸ್ಕೋರರ್ ಆಗಿ ಮಿಂಚುತ್ತಿರುವ ವಿರಾಟ್ ಕೊಹ್ಲಿ ಮುಂಬರುವ ಟಿ20 ವಿಶ್ವಕಪ್ ತಂಡದಲ್ಲಿ ಸ್ಥಾನ ಪಡೆಯುವುದು ಖಚಿತವಾಗಿದೆ.
ಉತ್ತಮ ಫಾರ್ಮ್ನಲ್ಲಿರುವ ಕೊಹ್ಲಿಯನ್ನು ವಿಶ್ವಕಪ್ ತಂಡಕ್ಕೆ ಆಯ್ಕೆ ಮಾಡಲು ಬಿಸಿಸಿಐ ನಿರ್ಧರಿಸಿದೆ ಎಂದು ವರದಿಯಾಗಿದೆ. ಈ ಹಿಂದೆ ಟಿ20 ವಿಶ್ವಕಪ್ನಿಂದ ಹೊರಗುಳಿಯುವಂತೆ ವಿರಾಟ್ ಕೊಹ್ಲಿಯನ್ನು ಮನವೊಲಿಸಬೇಕೆಂದು ಆಯ್ಕೆ ಸಮಿತಿ ಅಧ್ಯಕ್ಷ ಅಜಿತ್ ಅಗರ್ಕರ್ ಅವರಿಗೆ ಬಿಸಿಸಿಐ ಕಾರ್ಯದರ್ಶಿ ಜಯ್ ಶಾ ಸೂಚಿಸಿದ್ದರು ಎನ್ನಲಾಗಿತ್ತು. ಆದರೆ ಈ ಜವಾಬ್ದಾರಿಯಿಂದ ಅಗರ್ಕರ್ ಹಿಂದೆ ಸರಿದಿದ್ದರು. ಇದಾದ ಬಳಿಕ ರೋಹಿತ್ ಶರ್ಮಾ ಅವರಲ್ಲಿ ಜಯ್ ಶಾ ಈ ವಿಚಾರವನ್ನು ಪ್ರಸ್ತಾಪಿಸಿದ್ದರು ಎಂದು ಮಾಜಿ ಕ್ರಿಕೆಟಿಗ ಕೀರ್ತಿ ಆಝಾದ್ ಬಹಿರಂಗಪಡಿಸಿದ್ದರು.
ಆದರೆ ವಿರಾಟ್ ಕೊಹ್ಲಿ ತಂಡದಲ್ಲಿ ಇರಲೇಬೇಕೆಂದು ರೋಹಿತ್ ಶರ್ಮಾ ಬಿಸಿಸಿಐ ಕಾರ್ಯದರ್ಶಿಗೆ ಹೇಳಿದ್ದಾರೆಂದು ಕೀರ್ತಿ ಆಝಾದ್ ತಿಳಿಸಿದ್ದರು. ಇದಾಗ್ಯೂ ಐಪಿಎಲ್ನಲ್ಲಿ ವಿರಾಟ್ ಕೊಹ್ಲಿಯ ಪ್ರದರ್ಶನದ ಮೇಲೆ ಬಿಸಿಸಿಐ ಆಯ್ಕೆ ಸಮಿತಿ ಕಣ್ಣಿಟ್ಟಿದ್ದರು.
ಆದರೀಗ ಕೇವಲ 5 ಪಂದ್ಯಗಳ ಮೂಲಕ ವಿರಾಟ್ ಕೊಹ್ಲಿ 316 ರನ್ ಕಲೆಹಾಕಿದ್ದಾರೆ. ಈ ಮೂಲಕ ಈ ಬಾರಿಯ ಐಪಿಎಲ್ನಲ್ಲಿ ಅತೀ ಹೆಚ್ಚು ರನ್ ಬಾರಿಸಿದ ಬ್ಯಾಟರ್ಗಳ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದ್ದಾರೆ.
ಹೀಗಾಗಿ ಮುಂಬರುವ ಟಿ20 ವಿಶ್ವಕಪ್ಗೆ ವಿರಾಟ್ ಕೊಹ್ಲಿಯನ್ನು ಆಯ್ಕೆ ಮಾಡಲೇಬೇಕಾದ ಅನಿವಾರ್ಯತೆ ಬಿಸಿಸಿಐ ಎದುರಾಗಿದೆ. ಏಕೆಂದರೆ ಉತ್ತಮ ಬ್ಯಾಟಿಂಗ್ ಪ್ರದರ್ಶಿಸಿರುವ ಕೊಹ್ಲಿಯನ್ನು ಯಾವುದೇ ಕಾರಣದಿಂದಲೂ ತಂಡದಿಂದ ಕೈ ಬಿಡಲು ಸಾಧ್ಯವಾಗುವುದಿಲ್ಲ. ಹೀಗಾಗಿ ಅವರು ಟಿ20 ವಿಶ್ವಕಪ್ಗೆ ಆಯ್ಕೆಯಾಗುವುದು ಖಚಿತ ಎಂದು ಬಿಸಿಸಿಐ ಮೂಲಗಳು ತಿಳಿಸಿವೆ ಎಂದು ಕ್ರಿಕ್ ಬಝ್ ವರದಿ ಮಾಡಿದೆ.
ಜೂನ್ 1 ರಿಂದ ಶುರುವಾಗಲಿರುವ ಟಿ20 ವಿಶ್ವಕಪ್ಗಾಗಿ ಆಯ್ಕೆ ಮಾಡಲಾಗುವ ಭಾರತ ತಂಡದಲ್ಲಿ ವಿರಾಟ್ ಕೊಹ್ಲಿ ಕಾಣಿಸಿಕೊಳ್ಳುವುದು ಖಚಿತ ಎನ್ನಬಹುದು. ಅಲ್ಲದೆ ಇದು ಕಿಂಗ್ ಕೊಹ್ಲಿಯ ಕೊನೆಯ ಟಿ20 ವಿಶ್ವಕಪ್ ಆಗಿರಲಿದೆ.