ಬೆಂಗಳೂರು,ಏ 03(DaijiworldNews/AK): ರಣಜಿ ಕ್ರಿಕೆಟಿಗ ಕೆಸಿ ಕರಿಯಪ್ಪ ಅವರಿಗೆ ಪೊಲೀಸರಿಂದ ನಿರಾಕ್ಷೇಪಣೆ ಸಿಕ್ಕ ತಕ್ಷಣ ಇಂಗ್ಲೆಂಡ್ ಪ್ರವಾಸಕ್ಕೆ ವೀಸಾ ಒದಗಿಸಲಾಗಿದೆ ಎಂದು ಕೇಂದ್ರ ಸರ್ಕಾರದ ಪರ ವಕೀಲರು ಹೈಕೋರ್ಟ್ಗೆ ಮಾಹಿತಿ ನೀಡಿದ್ದಾರೆ.
ತಮ್ಮ ವಿರುದ್ಧ ದಾಖಲಾದ ಪ್ರಕರಣದಿಂದಾಗಿ ಪೊಲೀಸ್ ಕ್ಲಿಯರೆನ್ಸ್ ಹಾಗೂ ವೀಸಾ ದೊರೆಯದ ಕಾರಣ ಕ್ರಿಕೆಟ್ ಆಡಲು ಇಂಗ್ಲೆಂಡ್ಗೆ ತೆರಳಲು ಅಡ್ಡಿ ಉಂಟಾದ ಹಿನ್ನೆಲೆಯಲ್ಲಿ ಕೆ.ಸಿ. ಕಾರಿಯಪ್ಪ ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರಿದ್ದ ಏಕಸದಸ್ಯ ನ್ಯಾಯಪೀಠ ವಿಚಾರಣೆ ನಡೆಸಿತ್ತು
ಈ ವೇಳೆ ಕೇಂದ್ರ ಸರ್ಕಾರದ ಉಪ ಸಾಲಿಸಿಟರ್ ಜನರಲ್ ಎಚ್. ಶಾಂತಿಭೂಷಣ್ ಹಾಜರಾಗಿ, ಪೊಲೀಸ್ ಕ್ಲಿಯರೆನ್ಸ್ ನೀಡಿದ 60 ನಿಮಿಷಗಳಲ್ಲಿ ವೀಸಾ ಒದಗಿಸಲಾಗುವುದು ಎಂದು ನ್ಯಾಯಾಲಯಕ್ಕೆ ಭರವಸೆ ನೀಡಲಾಗಿತ್ತು.
ಹಾಗಾಗಿ ಕೋರ್ಟ್ಸೂಚನೆ ಮೇರೆಗೆ ಬೆಂಗಳೂರು ಪೊಲೀಸ್ ಇಲಾಖೆಯಿಂದ ಕ್ಲಿಯರೆನ್ಸ್ ದೊರಕಿದ 60 ನಿಮಿಷಗಳಲ್ಲೇ ಪ್ರಾದೇಶಿಕ ಪಾಸ್ಪೋರ್ಟ್ ಕಚೇರಿ ಕಾರಿಯಪ್ಪ ಅವರಿಗೆ ವೀಸಾ ಒದಗಿಸಿದೆ ಎಂದು ಮಾಹಿತಿ ನೀಡಿದರು.
ನ್ಯಾಯಪೀಠ, ಕೇವಲ 60 ನಿಮಿಷಗಳಲ್ಲಿ ವೀಸಾ ಒದಗಿಸಿದ ಪ್ರಾದೇಶಿಕ ಪಾಸ್ ಪೋರ್ಟ್ ಕಚೇರಿಯ ಕ್ರಮಕ್ಕೆ ಹಾಗೂ ಉಪ ಸಾಲಿಸಿಟರ್ ಜನರಲ್ ಅವರ ಕಾರ್ಯವೈಖರಿಗೆ ನ್ಯಾಯಪೀಠ ಶ್ಲಾಘನೆ ವ್ಯಕ್ತಪಡಿಸಿ ಅರ್ಜಿ ಇತ್ಯರ್ಥ ಪಡಿಸಿತ್ತು.
ಇತ್ತೀಚೆಗೆ ರಣಜಿ ಕ್ರಿಕೆಟಿಗ ಕೆ.ಸಿ ಕಾರಿಯಪ್ಪ ವಿರುದ್ಧ ಪ್ರೀತಿಸಿ ಮೋಸ ಮಾಡಿದ್ದಾರೆ ಎಂ ದು ಆರೋಪಿಸಿ ಯುವತಿಯೊಬ್ಬಳು ದೂರು ನೀಡಿದ್ದಳು. ಈ ಹಿನ್ನಲೆ ಆರ್.ಟಿ. ನಗರ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿತ್ತು.ಈ ಪ್ರಕರಣದ ಹಿನ್ನಲೆಯಲ್ಲಿ ಕೆ.ಸಿ.ಕಾರ್ಯಪ್ಪ ವಿದೇಶ ಪ್ರಯಾಣಕ್ಕೆ ನಿಷೇಧ ಹೇರಲಾಗಿತ್ತು. ಕ್ರಿಕೆಟ್ ಆಡಲು ಇಂಗ್ಲೆಂಡ್ ತೆರಳಬೇಕಿದ್ದು ಪೊಲೀಸರ ಕ್ಲಿಯೆರನ್ಸ್ ಸಿಗದೆ ವಿದೇಶ ಪ್ರಯಾಣಕ್ಕೆ ಅಡ್ಡಿಯಾಗುತ್ತಿದೆ ಎಂದು ಕಾರಿಯಪ್ಪ ಹೈಕೋರ್ಟ್ಗೆ ಅರ್ಜಿ ಸಲ್ಲಿಸಿದ್ದರು.