ಇಸ್ಲಾಮಾಬಾದ್, ಮಾ 31(DaijiworldNews/AA): ಪಾಕಿಸ್ತಾನ ಕ್ರಿಕೆಟ್ ತಂಡದ ನಾಯಕನಾಗಿ ಮತ್ತೆ ಬಾಬರ್ ಆಝಂ ನೇಮಕಗೊಂಡಿದ್ದಾರೆ. ಟಿ20 ವಿಶ್ವಕಪ್ ಆರಂಭಕ್ಕೂ ಮುನ್ನ ಪಾಕ್ ನ ಕ್ರಿಕೆಟ್ ಆಡಳಿತ ಮಂಡಳಿ ಈ ನಿರ್ಧಾರ ತೆಗೆದುಕೊಂಡಿದ್ದು, ಬಾಬರ್ ಅವರಿಗೆ ಮತ್ತೊಮ್ಮೆ ಕ್ಯಾಪ್ಟನ್ ಪಟ್ಟ ನೀಡಿದೆ.
2023 ರಲ್ಲಿ ನಡೆದ ಏಕದಿನ ವಿಶ್ವಕಪ್ ಪಂದ್ಯದಲ್ಲಿ ಪಾಕ್ ತಂಡ ಹೀನಾಯವಾಗಿ ಪ್ರದರ್ಶನ ನೀಡಿತ್ತು. ಹೀಗಾಗಿ ಬಾಬರ್ ಅವರನ್ನು ನಾಯಕತ್ವ ಸ್ಥಾನದಿಂದ ಕೆಳಗಿಸಲಾಗಿತ್ತು. ಜೊತೆಗೆ ಟಿ20 ತಂಡ ಹಾಗೂ ಏಕದಿನ ತಂಡಗಳಿಗೆ ಶಾಹೀನ್ ಅಫ್ರಿದಿಯನ್ನು ಹಾಗೂ ಟೆಸ್ಟ್ ಕ್ರಿಕೆಟ್ಗೆ ಶಾನ್ ಮಸೂದ್ ಅವರನ್ನು ನಾಯಕರನ್ನಾಗಿ ನೇಮಿಸಲಾಗಿತ್ತು.
ಶಾಹೀನ್ ಅಫ್ರಿದಿ ನಾಯಕತ್ವದಲ್ಲಿ ನ್ಯೂಝಿಲೆಂಡ್ ವಿರುದ್ಧ 5 ಪಂದ್ಯಗಳ ಟಿ20 ಸರಣಿ ಆಡಿರುವ ಪಾಕ್ ತಂಡವು 4-1 ಅಂತರದಿಂದ ಸೋಲನ್ನು ಕಂಡಿತ್ತು. ಇನ್ನು ಶಾನ್ ಮಸೂದ್ ಮುಂದಾಳತ್ವದಲ್ಲಿ ಆಸ್ಟ್ರೇಲಿಯಾ ವಿರುದ್ಧ 3 ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ಪಾಕ್ ತಂಡವು 3-0 ಅಂತರದಿಂದ ಸೋತಿತ್ತು. ಬಳಿಕ ಪಾಕಿಸ್ತಾನ್ ಕ್ರಿಕೆಟ್ ಬೋರ್ಡ್ನಲ್ಲಿ ಮತ್ತೆ ನಾಯಕತ್ವ ಬದಲಾಯಿಸಬೇಂಬ ಗೊಂದಲ ಸೃಷ್ಟಿಯಾಗಿತ್ತು.
ಇದೀಗ ಪಾಕ್ ಕ್ರಿಕೆಟ್ ಮಂಡಳಿಯ ಹೊಸ ಅಧ್ಯಕ್ಷ ಸೈಯದ್ ಮೊಹ್ಸಿನ್ ರಾಝ ನಖ್ವಿ ಅವರು ಪಾಕ್ ತಂಡದ ಹೊಸ ನಾಯಕನನ್ನಾಗಿ ಬಾಬರ್ ಆಝಂ ಅವರನ್ನು ಮತ್ತೆ ನೇಮಿಸಿದ್ದಾರೆ. ಟಿ20 ಮತ್ತು ಏಕದಿನ ಪಂದ್ಯಗಳನ್ನು ಬಾಬರ್ ಆಝಂ ಅವರು ಮುನ್ನಡೆಸಲಿದ್ದಾರೆ. ಹಾಗೂ ಟೆಸ್ಟ್ ತಂಡದ ನಾಯಕನಾಗಿ ಶಾನ್ ಮಸೂದ್ ಅವರು ಮುಂದುವರೆಯುವ ಸಾಧ್ಯತೆ ಇದೆ.