ಮುಂಬೈ, ಮಾ 26(DaijiworldNews/ Ak):ಭಾರತ ಮತ್ತು ಆಸ್ಟ್ರೇಲಿಯಾ ನಡುವಣ ಬಾರ್ಡರ್-ಗವಾಸ್ಕರ್ ಟೆಸ್ಟ್ ಸರಣಿಯ ವೇಳಾಪಟ್ಟಿ ಪ್ರಕಟವಾಗಿದೆ. ಆಸ್ಟ್ರೇಲಿಯಾದಲ್ಲಿ ನಡೆಯಲಿರುವ ಈ ಸರಣಿಯಲ್ಲಿ ಒಟ್ಟು 5 ಪಂದ್ಯಗಳು ನಡೆಯಲಿದೆ. ಈ ಹಿಂದೆ BGT ಸರಣಿಯಲ್ಲಿ 3 ಹಾಗೂ 4 ಪಂದ್ಯಗಳನ್ನು ಆಡಲಾಗುತ್ತಿತ್ತು. ಇದೇ ಮೊದಲ ಬಾರಿಗೆ ಕ್ರಿಕೆಟ್ ಆಸ್ಟ್ರೇಲಿಯಾ ಭಾರತ ವಿರುದ್ಧ 5 ಪಂದ್ಯಗಳ ಟೆಸ್ಟ್ ಸರಣಿಯನ್ನು ಆಯೋಜಿಸುತ್ತಿರುವುದು.
ಈ ಸರಣಿಯ ಮೊದಲ ಪಂದ್ಯವು ನವೆಂಬರ್ 22 ರಿಂದ ಶುರುವಾಗಲಿದೆ. ಪರ್ತ್ನಲ್ಲಿ ಮೊದಲ ಪಂದ್ಯ ನಡೆದರೆ, 2ನೇ ಪಂದ್ಯಕ್ಕೆ ಅಡಿಲೇಡ್ ಆತಿಥ್ಯವಹಿಸಲಿದೆ. ವಿಶೇಷ ಎಂದರೆ ಈ ಸರಣಿಯ 2ನೇ ಪಂದ್ಯವು ಡೇ ನೈಟ್ ಪಂದ್ಯವಾಗಿದೆ. ಈ ಅಹರ್ನಿಶಿ ಪಂದ್ಯವನ್ನು ಪಿಂಕ್ ಬಾಲ್ನಲ್ಲಿ ಆಡಲಾಗುತ್ತದೆ.
ಮೂರನೇ ಪಂದ್ಯಕ್ಕೆ ಗಾಬ್ಬಾ ಮೈದಾನ ಆತಿಥ್ಯವಹಿಸಿದರೆ, ನಾಲ್ಕನೇ ಪಂದ್ಯವು ಮೆಲ್ಬೋರ್ನ್ನಲ್ಲಿ ನಡೆಯಲಿದೆ. ನಾಲ್ಕನೇ ಪಂದ್ಯವು ಬಾಕ್ಸಿಂಗ್ ಟೆಸ್ಟ್. ಕ್ರಿಸ್ಮಸ್ ಹಬ್ಬದ ಮರುದಿನ ನಡೆಯುವ ಪಂದ್ಯವನ್ನು ಬಾಕ್ಸಿಂಗ್ ಟೆಸ್ಟ್ ಎಂದು ಕರೆಯಲಾಗುತ್ತದೆ. ಅಂತಿಮ ಟೆಸ್ಟ್ ಪಂದ್ಯವು ಸಿಡ್ನಿಯಲ್ಲಿ ಜನವರಿ 3, 2025 ರಿಂದ ಶುರುವಾಗಲಿದೆ.