ಕೋಲ್ಕತ್ತಾ, ಮಾ 24(DaijiworldNews/AK):ಈಡನ್ ಗಾರ್ಡನ್ ಮೈದಾನದಲ್ಲಿ ಹೈದರಾಬಾದ್ ವಿರುದ್ಧ ನಡೆದ ಪಂದ್ಯದಲ್ಲಿ ನೀತಿ ಸಂಹಿತೆ ಉಲ್ಲಂಘಿಸಿದ ಆರೋಪದ ಮೇಲೆ ಕೋಲ್ಕತ್ತಾ ನೈಟ್ ರೈಡರ್ಸ್ ತಂಡದ ಆಟಗಾರ ಹರ್ಷಿತ್ ರಾಣಾಗೆ ಭಾರೀ ದಂಡ ವಿಧಿಸಲಾಗಿದೆ.
ಸನ್ ರೈಸರ್ಸ್ ಹೈದರಾಬಾದ್ನ ಆಟಗಾರರಾದ ಮಯಾಂಕ್ ಅಗರ್ವಾಲ್ ಹಾಗೂ ಹೆನ್ರಿಕ್ ಕ್ಲಾಸೆನ್ ಅವರು ಮೈದಾನ ತೊರೆಯುವಾಗ ಹರ್ಷಿತ್ ರಾಣಾ ಫ್ಲೈಯಿಂಗ್ ಕಿಸ್ ಸನ್ನೆ ಮಾಡುವ ಮೂಲಕ ದಂಡಕ್ಕೆ ಗುರಿಯಾಗಿದ್ದಾರೆ.
ಕೋಲ್ಕತ್ತಾ ನೈಟ್ ರೈಡರ್ಸ್ ತಂಡದ ಯುವ ಆಟಗಾರ ಹರ್ಷಿತ್ ರಾಣಾ ತಮ್ಮ ಅಂತಿಮ ಓವರ್ನಲ್ಲಿ ನೀಡಿದ ಪ್ರದರ್ಶನದಿಂದ ಕೆಕೆಆರ್ ತಂಡದ ಪಾಲಿನ ಹೀರೋ ಆಗಿ ಅಭಿಮಾನಿಗಳ ಮನ ಗೆದ್ದಿದ್ದರು.
ಆದ್ರೆ ಪಂದ್ಯದ ಮಧ್ಯೆ ಅವರ ನಡವಳಿಕೆ ಹಲವರ ಅಸಮಾಧಾನಕ್ಕೂ ಕಾರಣವಾಯಿತು. ಮೈದಾನದಲ್ಲಿ ಅಶಿಸ್ತು ವರ್ತನೆ ತೋರಿಸಿದ ಕಾರಣ ಹರ್ಷಿತ್ ರಾಣಾಗೆ ಪಂದ್ಯದ ಒಟ್ಟು ಶುಲ್ಕದ ಶೇ.60 ರಷ್ಟು ಮೊತ್ತವನ್ನು ದಂಡವಾಗಿ ಪಾವತಿಸುವಂತೆ ಐಪಿಎಲ್ ಸಮಿತಿ ಸೂಚಿಸಿದೆ. ಐಪಿಎಲ್ ನೀತಿ ಸಂಹಿತೆ ಆರ್ಟಿಕಲ್ 2.4ರ ಅಡಿಯಲ್ಲಿ ಅಪರಾಧವಾಗಿದೆ ಎಂದು ಐಪಿಎಲ್ ಸಮಿತಿ ತಿಳಿಸಿದೆ.