ಮುಂಬೈ, ಮಾ 15(DaijiworldNews/AA): ಈ ವರ್ಷದ ಜೂನ್ನಲ್ಲಿ ವೆಸ್ಟ್ ಇಂಡೀಸ್ ಮತ್ತು ಅಮೆರಿಕ ಜಂಟಿಯಾಗಿ ಟಿ20 ವಿಶ್ವಕಪ್ ಆಯೋಜಿಸಿದೆ. ಈ ಟಿ20 ವಿಶ್ವಕಪ್ ನಲ್ಲಿ ಕಳೆದ ಡಿಸೆಂಬರ್ ಆರಂಭದಲ್ಲಿ ಪ್ರಾಯೋಗಿಕವಾಗಿ ಜಾರಿಗೆ ತರಲಾಗಿದ್ದ ಸ್ಟಾಪ್ ಕ್ಲಾಕ್ ನಿಯಮವನ್ನು ಶಾಶ್ವತವಾಗಿ ಜಾರಿಗೆ ತರಲು ಐಸಿಸಿ ಮುಂದಾಗಿದ್ದು, ಈ ಮೂಲಕ ಮಹತ್ವದ ನಿರ್ಧಾರ ತೆಗೆದುಕೊಂಡಿದೆ.
ಸ್ಟಾಪ್ ಕ್ಲಾಕ್ ನಿಯಮದ ಅನುಸಾರ ಫೀಲ್ಡಿಂಗ್ ತಂಡವು 1 ಓವರ್ ಮುಗಿದ ನಂತರ ನಿಗದಿತ ಸಮಯದೊಳಗೆ 2ನೇ ಓವರ್ ಅನ್ನು ಪ್ರಾರಂಭಿಸಬೇಕು. ಒಂದು ವೇಳೆ ಪ್ರಾರಂಭಿಸದೇ ಇದ್ದರೆ ಫೀಲ್ಡಿಂಗ್ ತಂಡಕ್ಕೆ 5 ರನ್ಗಳನ್ನು ದಂಡವಾಗಿ ವಿಧಿಸಲಾಗುತ್ತದೆ. ಐಸಿಸಿಯು ಮುಂದಿನ ಟಿ20 ವಿಶ್ವಕಪ್ ನಲ್ಲಿ ಈ ನಿಯಮ ಶಾಶ್ವತವಾಗಿ ಅನುಷ್ಠಾನಗೊಳಿಸಲು ನಿರ್ಧರಿಸಿದೆ. ಅಷ್ಟೇ ಅಲ್ಲದೇ ಏಕದಿನ ಪಂದ್ಯಕ್ಕೂ ಈ ನಿಯಮ ಜಾರಿಗೆ ತರಲಿದೆ ಎಂದು ತಿಳಿದು ಬಂದಿದೆ.
ಕಳೆದ ವರ್ಷ ಪ್ರಾಯೋಗಿಕವಾಗಿ ಜಾರಿಗೆ ತಂದ ಸ್ಟಾಪ್ ಕ್ಲಾಕ್ ನಿಯಮವನ್ನು ಈ ಬಾರಿ ಕ್ರಿಕೆಟ್ನ ಶಾಶ್ವತ ನಿಯಮಗಳ ಪಟ್ಟಿಯಲ್ಲಿ ಸೇರಿಸಲಾಗುವುದು. ಡಿಸೆಂಬರ್ ಆರಂಭದಲ್ಲಿ ಜಾರಿಗೆ ತರಲಾಗಿದ್ದ ಈ ನಿಯಮದ ಪ್ರಾಯೋಗಿಕ ಅವಧಿ ಏಪ್ರಿಲ್ನಲ್ಲಿ ಕೊನೆಗೊಳ್ಳಲಿದೆ. ಆದರೆ ಈ ನಿಯಮ ತುಂಬಾ ಉಪಕಾರಿಯಾಗಿದ್ದು, ಈ ನಿಯಮವನ್ನು ಶಾಶ್ವತವಾಗಿ ಜಾರಿಗೆ ತರಲು ಐಸಿಸಿ ನಿರ್ಧಾರ ಮಾಡಿದೆ. ಇನ್ನು ಈ ಸಂಬಂಧ ಐಸಿಸಿ ದುಬೈನಲ್ಲಿ ಅನೇಕ ಸಭೆಗಳನ್ನು ನಡೆಸುತ್ತಿದೆ. ಆ ಸಭೆಯಲ್ಲಿ ಈ ನಿಯಮವನ್ನು ಜಾರಿಗೆ ತರಲು ನಿರ್ಧಾರ ಮಾಡಲಾಗಿದೆ ಎನ್ನಲಾಗಿದೆ.