ಬೆಂಗಳೂರು, ಮಾ 13(DaijiworldNews/MS): ಇನ್ನೇನು ಐಪಿಎಲ್ 17ನೇ ಆವೃತ್ತಿಗೆ ಕೆಲ ದಿನಗಳಷ್ಟೇ ಬಾಕಿ ಉಳಿದಿವೆ. ಮಾರ್ಚ್ 22ರಂದು ನಡೆಯುವ ಉದ್ಘಾಟನ ಪಂದ್ಯದಲ್ಲಿ ಹಾಲಿ ಚಾಂಪಿಯನ್ ಚೆನ್ನೈ ಸೂಪರ್ ಕಿಂಗ್ಸ್ ಮತ್ತು ಆರ್ಸಿಬಿ ತಂಡ ಮುಖಾಮುಖಿಯಾಗಿದೆ. ಪ್ರತಿ ಬಾರಿಯಂತೆ ಈ ಬಾರಿಯೂ ಆರ್ಸಿಬಿ ಅಭಿಮಾನಿಗಳು ಜೋಶ್ನಲ್ಲಿದ್ದಾರೆ. ಈ ಬಾರಿಯಾದರೂ ಕಪ್ ಒಲಿಯಬಹುದೇ ಎಂಬ ನಿರೀಕ್ಷೆಯಲ್ಲಿ ಅಭಿಮಾನಿ ಬಳಗವಿದೆ.
ಆರ್ಸಿಬಿ ತನ್ನ ಅಭಿಯಾನ ಆರಂಭಿಸುವ ಮುನ್ನ ಪೂರ್ವಭಾವಿಯಾಗಿ ಅಭಿಮಾನಿಗಳಿಗಾಗಿ ಮಾರ್ಚ್ 19ರಂದು ‘ಆರ್ಸಿಬಿ ಅನ್ಬಾಕ್ಸ್' ಎಂಬ ಕಾರ್ಯಕ್ರಮ ನಡೆಯಲಿದೆ. ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಈ ಕಾರ್ಯಕ್ರಮದಲ್ಲಿ ಆರ್ಸಿಬಿ ಅನ್ಬಾಕ್ಸ್ನಲ್ಲಿ ತಂಡದ ಹೊಸ ಜೆರ್ಸಿಯನ್ನೂ ಅನಾವರಣಗೊಳಿಸಲಾಗುವುದು. ಜತೆಗೆ ಅಭಿಮಾನಿಗಳ ಎದುರು ಹಲವು ಅಚ್ಚರಿಯ ಮತ್ತು ವಿಶೇಷ ಘೋಷಣೆಗಳನ್ನು ಮಾಡಲಾಗುವುದು ಎಂದು ಆರ್ಸಿಬಿ ತಂಡ ತಿಳಿಸಿದೆ.
ಇದೆಲ್ಲಕ್ಕಿಂತಲೂ ಕುತೂಹಲ ಮೂಡಿಸಿರುವುದು ಆರ್ಸಿಬಿ ಬಿಡುಗಡೆ ಮಾಡಿದ ಪ್ರೋಮೊ. ಇದರಲ್ಲಿ ನಟ, ನಿರ್ದೇಶಕ ರಿಷಬ್ ಶೆಟ್ಟಿ, ‘ಕಾಂತಾರ’ ಶಿವನ ಗೆಟಪ್ನಲ್ಲಿ ಸ್ಟೈಲ್ ‘ಆರ್ಸಿಬಿ ಕೋಣ’ಗಳ ಜೊತೆ ಎಂಟ್ರಿ ಕೊಟ್ಟಿದ್ದಾರೆ. ಮೊದಲ ಕೋಣದ ಮೇಲೆ ರಾಯಲ್, ೨ನೇ ಕೋಣದ ಮೇಲೆ ಚಾಲೆಂಜರ್ಸ್ ಎಂದು ಬರೆಯಲಾಗಿದೆ. ಮೂರನೇ ಕೋಣದ ಮೇಲೆ ಬ್ಯಾಂಗಲೂರ್ ಎಂದು ಬರೆಯಲಾಗಿದೆ. ಮೂರನೇ ಕೋಣದ ಬಳಿಕ ಬರುವ ರಿಷಬ್ ಶೆಟ್ಟಿ, ‘ಭಟ್ರೆ, ಇದು ಚೆನ್ನಾಗಿಲ್ಲ ತಗೋಂಡು ಹೋಗಿ’ ಎನ್ನುತ್ತಾರೆ. ಕೂಡಲೇ ಬ್ಯಾಂಗಲೂರ್ ಎಂದು ಬರೆದಿರುವ ಕೋಣವನ್ನು ಅಲ್ಲಿಂದ ಕರೆದುಕೊಂಡು ಹೋಗಲಾಗುತ್ತದೆ. ಆಗ ರಿಷಬ್ ಶೆಟ್ಟಿ ನೋಡುಗರ ಕಡೆ ತಿರುಗಿ, ‘ಅರ್ಥವಾಯ್ತಾ’ ಎಂದು ಕೇಳುತ್ತಾರೆ. ಅವರ ಈ ಹೇಳಿಕೆ ನೋಡುವಾಗ ರಾಯಲ್ ಚಾಲೆಂಜರ್ಸ್ ಮುಂದೆ ‘ಬ್ಯಾಂಗಲೂರ್’ ಬದಲು ‘ಬೆಂಗಳೂರು’ ಎಂದು ಬದಲಾವಣೆಯಾಗಲಿದೆಯಾ ಎಂಬ ಅನುಮಾನ ಹುಟ್ಟುಹಾಕಿದೆ. ಏನೇ ಬದಲಾವಣೆ ಇದ್ದರೂ ಕೂಡ ಮಾರ್ಚ್ 19ರ ತನಕ ಕಾಯಲೇ ಬೇಕು.