ಮುಂಬೈ, ಮಾ 12(DaijiworldNews/AA): 17ನೇ ಸೀಸನ್ ನ ಐಪಿಎಲ್ ನಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡದ ನಾಯಕ ರಿಷಭ್ ಪಂತ್ ಆಡಲಿದ್ದಾರೆ. ಟೀಮ್ ಇಂಡಿಯಾ ವೇಗಿ ಮೊಹಮ್ಮದ್ ಶಮಿ ಹಾಗೂ ಪ್ರಸಿದ್ಧ್ ಕೃಷ್ಣ ಐಪಿಎಲ್ನಲ್ಲಿ ಭಾಗವಹಿಸಲು ಸಾಧ್ಯವಾಗುವುದಿಲ್ಲ ಎಂದು ಬಿಸಿಸಿಐ ತಿಳಿಸಿದೆ.
ಕಳೆದ 14 ತಿಂಗಳುಗಳಿಂದ ಟೀಮ್ ಇಂಡಿಯಾದಿಂದ ಹೊರಗುಳಿದಿದ್ದ ರಿಷಭ್ ಪಂತ್ ಎನ್ ಸಿಎ ನಲ್ಲಿ ಫಿಟ್ನೆಸ್ ಟೆಸ್ಟ್ಗೆ ಒಳಗಾಗಿದ್ದು, ಈ ಟೆಸ್ಟ್ನಲ್ಲಿ ಪಂತ್ ತಮ್ಮ ಫಿಟ್ನೆಸ್ ಅನ್ನು ಸಾಬೀತುಪಡಿಸಿದ್ದಾರೆ. ಈ ಹಿನ್ನೆಲೆ ಈ ಬಾರಿಯ ಐಪಿಎಲ್ ನಲ್ಲಿ ಆಡಲು ರಿಷಭ್ ಪಂತ್ ಗೆ ಬಿಸಿಸಿಐ ಗ್ರೀನ್ ಸಿಗ್ನಲ್ ನೀಡಿದೆ.
ಟೀಮ್ ಇಂಡಿಯಾ, ಗುಜರಾತ್ ಟೈಟಾನ್ಸ್ ನ ವೇಗಿ ಮೊಹಮ್ಮದ್ ಶಮಿ ಅವರು ಇತ್ತೀಚೆಗಷ್ಟೇ ಲಂಡನ್ ನಲ್ಲಿ ಹಿಮ್ಮಡಿ ಪಾದದ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದರು. ಸದ್ಯ ಬಿಸಿಸಿಐ ವೈದ್ಯಕೀಯ ತಂಡದ ಮೇಲ್ವಿಚಾರಣೆಯಲ್ಲಿರುವ ಅವರು ಗಾಯದಿಂದ ಗುಣಮುಖರಾಗಲು ಕೆಲ ತಿಂಗಳುಗಳು ಬೇಕಾಗಿದೆ. ಹೀಗಾಗಿ ಶಮಿ ಐಪಿಎಲ್ ನಲ್ಲಿ ಆಡಲು ಸಾಧ್ಯವಾಗುವುದಿಲ್ಲ ಎಂದು ಬಿಸಿಸಿಐ ಹೇಳಿದೆ.
ಇನ್ನು ಟೀಮ್ ಇಂಡಿಯಾ ಹಾಗೂ ರಾಜಸ್ಥಾನ್ ರಾಯಲ್ಸ್ ತಂಡದ ವೇಗದ ವೇಗಿ ಪ್ರಸಿದ್ಧ್ ಕೃಷ್ಣ ಅವರು ಎಡ ಪ್ರಾಕ್ಸಿಮಲ್ ಕ್ವಾಡ್ರೈಸ್ಪ್ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದಾರೆ. ಆದ್ದರಿಂದ ಅವರು ಕೂಡ ಈ ಬಾರಿಯ ಐಪಿಎಲ್ ನಲ್ಲಿ ಭಾಗವಹಿಸಲು ಸಾಧ್ಯವಾಗುವುದಿಲ್ಲ ಎಂದು ಬಿಸಿಸಿಐ ತಿಳಿಸಿದೆ.