ಚೆನ್ನೈ, ಮಾ 02(DaijiworldNews/AA): 17ನೇ ಆವೃತ್ತಿಯ ಐಪಿಎಲ್ ಇದೇ ಮಾ. 22ರಿಂದ ಪ್ರಾರಂಭವಾಗಲಿದ್ದು, ಈ ಆವೃತ್ತಿಯ ಮೊದಲ ಪಂದ್ಯದಲ್ಲಿ ಹಾಲಿ ಚಾಂಪಿಯನ್ ಚೆನ್ನೈ ಸೂಪರ್ ಕಿಂಗ್ಸ್ (ಸಿಎಸ್ಕೆ) ಹಾಗೂ ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್ ಸಿಬಿ) ಮುಖಾಮುಖಿಯಾಗಲಿದೆ.
ಸಿಎಸ್ಕೆ ಹಾಗೂ ಆರ್ ಸಿಬಿ ನಡುವಿನ ಪಂದ್ಯಕ್ಕೆ 3 ವಾರಗಳಿಗಿಂತ ಕಡಿಮೆ ಸಮಯ ಉಳಿದಿದೆ. ಈ ಹಿನ್ನೆಲೆ ಇಂದಿನಿಂದಲೇ ಸಿಎಸ್ ಕೆ ತಂಡವು ಚೆನ್ನೈನಲ್ಲಿ ಅಭ್ಯಾಸ ಪ್ರಾರಂಭಿಸಿದೆ. ಚೆನ್ನೈ ಸೂಪರ್ ಕಿಂಗ್ಸ್ ಫ್ರಾಂಚೈಸಿ ಆಯೋಜಿಸಿರುವ ಈ ವಿಶೇಷ ಶಿಬಿರಕ್ಕೆ ತಂಡದ ಕೆಲ ಆಟಗಾರರು ಆಗಮಿಸಿದ್ದು, ಎಂಎಸ್ ಧೋನಿ ಇನ್ನೂ ಆಗಮಿಸಿಲ್ಲ ಎಂದು ತಿಳಿದುಬಂದಿದೆ.
ನಿನ್ನೆ ಇಂದ ಪ್ರಾರಂಭವಾಗಿರುವ ಶಿಬಿರವು ಇಂದು ಕೂಡ ಮುಂದುವರೆದಿದ್ದು, ಈ ಶಿಬಿರಕ್ಕೆ ಸಿಎಸ್ಕೆ ತಂಡದ ಸ್ಟಾರ್ ವೇಗಿ ದೀಪಕ್ ಚಹಾರ್, ಮುಖೇಶ್ ಚೌಧರಿ, ಸಿಮರ್ಜೀತ್ ಸಿಂಗ್, ರಾಜವರ್ಧನ್ ಹಂಗರ್ಗೇಕರ್, ಪ್ರಶಾಂತ್ ಸೋಲಂಕಿ, ಅಜಯ್ ಮಂಡಲ್ ಆಗಮಿಸಿದ್ದಾರೆ. ಮೊದಲ ಬ್ಯಾಚ್ ನಿನ್ನೆ ಶಿಬಿರವನ್ನು ತಲುಪಿದ್ದು, ಮುಂಬರುವ ದಿನಗಳಲ್ಲಿ ಇನ್ನು ಕೆಲ ಆಟಗಾರರು ಶಿಬಿರಕ್ಕೆ ಆಗಮಿಸಲಿದ್ದಾರೆ ಎಂದು ತಮಿಳುನಾಡು ಕ್ರಿಕೆಟ್ ಸಂಸ್ಥೆಯ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.