ಮಂಗಳೂರು, ಫೆ 28 (DaijiworldNews/SK): ಆಫ್ರಿಕಾ ಖಂಡದ ತಾಂಜಾನಿಯ ದೇಶದಲ್ಲಿ ನಡೆದ Taliss-IST ಆಹ್ವಾನಿತರ ಅಂತಾರಾಷ್ಟ್ರೀಯ ಈಜು ಸ್ಪರ್ಧೆಯಲ್ಲಿ ಮಂಗಳಾ ಸ್ವಿಮ್ಮಿಂಗ್ ಕ್ಲಬ್ಬಿನ ಸದಸ್ಯ ಚಿಂತನ್ ಎಸ್. ಶೆಟ್ಟಿ ದಾಖಲೆಯೊಂದಿಗೆ ಚಿನ್ನದ ಪದಕ, ಬೆಳ್ಳಿ ಪದಕ, ಹಾಗೂ ಕಂಚಿನ ಪದಕಗಳನ್ನು ಗೆದ್ದು ಅಪರೂಪದ ಸಾಧನೆಯನ್ನು ಮಾಡಿದ್ದಾರೆ.
ಚಿಂತನ್ ಅವರು 15 - 16 ವರ್ಷದ ಬಾಲಕರ ವಿಭಾಗದಲ್ಲಿ ಸ್ಪರ್ಧಿಸಿ 50 ಮತ್ತು 100 ಮೀಟರ್ ಪ್ರಿಸ್ಟೆಲ್, 50 ಮೀಟರ್ 100 ಮೀಟರ್ ಬಟರ್ ಫ್ಲೈ ಹಾಗೂ 100 ಮೀಟರ್ ವೈಯಕ್ತಿಕ ಮಿಡ್ಲೆ ವಿಭಾಗಗಳಲ್ಲಿ ನೂತನ ಕೂಟ ದಾಖಲೆಯನ್ನು ಬರೆದರು.ಜೊತೆಗೆ 400 ಮೀಟರ್ ವೈಯಕ್ತಿಕ ಮಿಡ್ಲೆ ವಿಭಾಗದಲ್ಲಿ ಬೆಳ್ಳಿ ಪದಕ,ಇನ್ನೂರು ಮೀಟರ್ ಮಿಡ್ಲೆ ರಿಲೆಯಲ್ಲಿ ಕಂಚಿನ ಪದಕಗಳೊಂದಿಗೆ ಈ ವಿಭಾಗದ ವೈಯಕ್ತಿಕ ಚಾಂಪಿಯನ್ಶಿಪ್ ಪಡೆದುಕೊಂಡಿದ್ದಾರೆ.
ಮಂಗಳೂರಿನ ಬಂಟ್ಸ್ ಹಾಸ್ಟೆಲ್ನಲ್ಲಿರುವ ಶ್ರೀ ರಾಮಕೃಷ್ಣ ಫ್ರೌಡ ಶಾಲೆಯ ವಿದ್ಯಾರ್ಥಿಯಾಗಿರುವ ಚಿಂತನ್ ಅವರು, ಮಂಗಳಾ ಸ್ವಿಮ್ಮಿಂಗ್ ಕ್ಲಬ್ಬಿನ ಹಿರಿಯ ಈಜು ತರಬೇತುದಾರರಾದ ಎಂ. ಶಿವಾನಂದ ಗಟ್ಟಿ ಇವರ ಮಾಗದರ್ಶನದಲ್ಲಿ ಹಾಗೂ ಅಂತರಾಷ್ಟ್ರೀಯ ಮಟ್ಟದ ತರಬೇತುದಾರರಾದ ಶಿಶಿರ್ ಎಸ್. ಗಟ್ಟಿ (ಎನ್.ಐ.ಎಸ್.), ಕೀರ್ತನ್ ಎಸ್. ಶೆಟ್ಟಿ. ಚೇತನ್ ಎಸ್. ಶೆಟ್ಟಿ. ರಾಜೇಶ್ ಖಾರ್ವಿ ಬೆಂಗ್ರೆ ಇವರಿಂದ ಮಂಗಳೂರು ಮಹಾನಗರ ಪಾಲಿಕೆ ಈಜುಕೊಳದಲ್ಲಿ ತರಬೇತಿ ಪಡೆಯುತ್ತಿದ್ದಾರೆ.