ಹಾಲೆ, ಫೆ 26(DaijiworldNews/AA): ಪ್ರಸ್ತುತ ಜಾವೆಲಿನ್ ಥ್ರೋ ಜಗತ್ತಿನಲ್ಲಿ ಭಾರತದ ತಾರೆ ನೀರಜ್ ಚೋಪ್ರಾ ಅಗ್ರಸ್ಥಾನದಲ್ಲಿದ್ದಾರೆ. ಇದೀಗ ಇವರಿಗೆ ಜರ್ಮನಿಯ ಮ್ಯಾಕ್ಸ್ ಡೆಹ್ನಿಂಗ್(19) ಪ್ರಬಲ ಎದುರಾಳಿಯಾಗಿ ಬಂದಿದ್ದಾರೆ.
ಮ್ಯಾಕ್ಸ್ ಡೆಹ್ನಿಂಗ್ ಅವರು ಹಾಲೆಯಲ್ಲಿ ನಡೆದ ಜರ್ಮನ್ ವಿಂಟರ್ ಥ್ರೋಯಿಂಗ್ ಚಾಂಪಿಯನ್ ಶಿಪ್ ನಲ್ಲಿ 90.20ಮೀ ಎಸೆದಿದ್ದಾರೆ. ಈ ದಾಖಲೆಯೊಂದಿಗೆ ಡೆಹ್ನಿಂಗ್ ಅವರು ಪುರುಷರ ಜಾವೆಲಿನ್ ಥ್ರೋ ಇತಿಹಾಸದಲ್ಲಿ 90 ಮೀ ಗಡಿ ದಾಟಿದ ಅತ್ಯಂತ ಕಿರಿಯ ಕ್ರೀಡಾಪಟು ಎಂದೆನಿಸಿಕೊಂಡಿದ್ದಾರೆ. ಹಾಗೂ ಒಲಿಂಪಿಕ್ಸ್ ವರ್ಷದಲ್ಲಿ ಈ ಗಡಿಯನ್ನು ದಾಟಿದ ಮೊದಲಿಗರಾಗಿದ್ದಾರೆ.
ಡೆಹ್ನಿಂಗ್ ಅವರ ಈವರೆಗಿನ ಸಾಧನೆ 70.07 ಮೀ. ಆಗಿದ್ದು, 2 ಬಾರಿ ಯು20 ವಿಶ್ವ ಚಾಂಪಿಯನ್ ಶಿಪ್ ನಲ್ಲಿ ಬೆಳ್ಳಿ ಪದಕ ಗೆದ್ದಿರುತ್ತಾರೆ. ಫೆಬ್ರವರಿ 25ರಂದು ನಡೆದ ಜರ್ಮನ್ ವಿಂಟರ್ ಥ್ರೋಯಿಂಗ್ ಚಾಂಪಿಯನ್ ಶಿಪ್ ನಲ್ಲಿ ಮೊದಲ ಪ್ರಯತ್ನದಲ್ಲಿ 90.20ಮೀ ಜಾವೆಲಿನ್ ಎಸೆಯುವ ಮೂಲಕ ಅದ್ಭುತ ಸಾಧನೆ ಗೈದಿದ್ದಾರೆ. ಇನ್ನು ತಮ್ಮ 2ನೇ ಪ್ರಯತ್ನದಲ್ಲಿ 85.54 ಮೀ ಜಾವೆಲಿನ್ ಎಸೆದಿದ್ದಾರೆ.
ಜಾವೆಲಿನ್ ಇತಿಹಾಸದಲ್ಲಿ ಅತ್ಯುತ್ತಮ ಥ್ರೋಗಳ ಪಟ್ಟಿಯಲ್ಲಿ 22ನೇ ಸ್ಥಾನಗಳಿಸಿದ್ದಾರೆ. ಆದರೆ ಈಗಾಗಲೇ ಒಲಿಂಪಿಕ್ಸ್, ಡೈಮಂಡ್ ಲೀಗ್, ಏಶ್ಯನ್ ಗೇಮ್ಸ್ ಸೇರಿದಂತೆ ಹಲವಾರು ಕ್ರೀಡಾಕೂಟದಲ್ಲಿ ತಮ್ಮದೇ ಆದ ಛಾಪು ಮೂಡಿಸಿರುವ ಭಾರತದ ನೀರಜ್ ಚೋಪ್ರಾ ಅವರು ಇದುವರೆಗೂ 90 ಮೀ ಗಡಿ ದಾಟಿಲ್ಲ. ಇದರೊಂದಿಗೆ ನೀರಜ್ ಚೋಪ್ರಾ ಅವರಿಗೆ ಡೆಹ್ನಿಂಗ್ ಅವರು ಪ್ರಬಲ ಎದುರಾಳಿಯಾಗುವ ಅವಕಾಶವಿದೆ ಎಂದು ಹೇಳಲಾಗುತ್ತಿದೆ.