ಶ್ರೀಲಂಕಾ, ಫೆ 25(DajiworldNews/SK): ಅಫ್ಘಾನಿಸ್ತಾನ ವಿರುದ್ಧದ ಮೂರನೇ ಟಿ20 ಪಂದ್ಯದ ವೇಳೆ ಅಂಪೈರ್ ಲಿಂಡನ್ ಹ್ಯಾನಿಬಲ್ ವಿರುದ್ಧ ಶ್ರೀಲಂಕಾದ ಟಿ20 ನಾಯಕ ವನಿಂದು ಹಸರಂಗ ಆಕ್ರೋಶ ವ್ಯಕ್ತಪಡಿಸಿದ್ದರು. ಇದ್ದರಿಂದ ಅಸಮಾಧಾನಗೊಂಡಿರುವ ಅಂತಾರಾಷ್ಟ್ರೀಯ ಕ್ರಿಕೆಟ್ ಮಂಡಳಿ (ಐಸಿಸಿ) ವನಿಂದು ಹಸರಂಗ ಅವರನ್ನು ಎರಡು ಪಂದ್ಯಗಳ ಅಮಾನತು ಮತ್ತು ಅವರ ಪಂದ್ಯದ ಶುಲ್ಕದ 50 ಪ್ರತಿಶತದಷ್ಟು ದಂಡವನ್ನು ವಿಧಿಸಿದೆ.
ಶ್ರೀಲಂಕಾದಲ್ಲಿ ನಡೆದ ಶ್ರೀಲಂಕಾ ಹಾಗೂ ಅಫ್ಘಾನಿಸ್ತಾನ ನಡುವಿನ ಮೂರು ಪಂದ್ಯಗಳ ಟಿ20 ಸರಣಿಯನ್ನು ಆತಿಥೇಯ ಶ್ರೀಲಂಕಾ 2-1 ಅಂತರದಲ್ಲಿ ಗೆದ್ದುಕೊಳ್ಳುವಲ್ಲಿ ಯಶಸ್ವಿಯಾಯಿತು.ಆದರೆ ಅಫ್ಘಾನಿಸ್ತಾನ ಮತ್ತು ಶ್ರೀಲಂಕಾ ನಡುವಿನ ಟಿ20 ಸರಣಿಯ ಮೂರನೇ ಮತ್ತು ಕೊನೆಯ ಪಂದ್ಯದಲ್ಲಿ ಹಸರಂಗ ಅಂಪೈರ್ ಲಿಂಡನ್ ಹ್ಯಾನಿಬಲ್ ಬಳಿಗೆ ಹೋಗಿ ಫುಲ್ ಟಾಸ್ಗೆ ನೋ ಬಾಲ್ ನೀಡದಿದ್ದಕ್ಕಾಗಿ ಅಸಮಾಧಾನ ಹೊರಹಾಕಿದ್ದರು.
ಇನ್ನು ಐಸಿಸಿ ನೀತಿ ಸಂಹಿತೆಯ ಆರ್ಟಿಕಲ್ 2.13 ಅನ್ನು ಉಲ್ಲಂಘಿಸಿದ್ದಕ್ಕಾಗಿ ಹಸರಂಗ ತಪ್ಪಿತಸ್ಥರೆಂದು ಕಂಡುಬಂದಿದೆ, ಇದು “ಅಂತಾರಾಷ್ಟ್ರೀಯ ಪಂದ್ಯದ ವೇಳೆ ಆಟಗಾರ, ಆಟಗಾರ ಬೆಂಬಲಿಗ ಸಿಬ್ಬಂದಿ, ಅಂಪೈರ್ ಅಥವಾ ಮ್ಯಾಚ್ ರೆಫರಿಯ ವೈಯಕ್ತಿಕ ನಿಂದನೆಗೆ ಸಂಬಂಧಿಸಿದೆ” ಎಂದು ಐಸಿಸಿ ಹೇಳಿದೆ.
ಅದರಂತೆ ಶನಿವಾರ ಸಂಜೆ ಮಹತ್ವದ ನಿರ್ಧಾರ ಕೈಗೊಂಡಿರುವ (ಐಸಿಸಿ) ಶ್ರೀಲಂಕಾ ಕ್ರಿಕೆಟ್ ತಂಡದ ನಾಯಕ ವನಿಂದು ಹಸರಂಗ ಅವರನ್ನು ಮುಂದಿನ ತಿಂಗಳು ಬಾಂಗ್ಲಾದೇಶ ವಿರುದ್ಧ ನಡೆಯಲ್ಲಿರುವ ಟಿ20 ಸರಣಿಯ ಮೊದಲ ಎರಡು ಪಂದ್ಯಗಳಿಂದ ಅಮಾನತುಗೊಳಿಸಲು ನಿರ್ಧರಿಸಿದೆ.