ಬೆಂಗಳೂರು, ಫೆ 23(DaijiworldNews/SK): ಬಹುನಿರೀಕ್ಷಿತ 2ನೇ ಆವೃತ್ತಿಯ ಮಹಿಳಾ ಪ್ರೀಮಿಯರ್ ಲೀಗ್ (ಡಬ್ಲ್ಯುಪಿಎಲ್)ಗೆ ಇಂದು ಅದ್ದೂರಿಯಾಗಿ ಚಾಲನೆ ದೊರೆಯಲಿದೆ. ಈ ಬಾರಿಯ ಟೂರ್ನಿಯನ್ನು 2 ನಗರಗಳಲ್ಲಿ ಆಯೋಜಿಸಲಾಗಿದ್ದು, ಬೆಂಗಳೂರಿನಲ್ಲಿ 11 ಪಂದ್ಯ ಹಾಗೂ ಫೈನಲ್ ಸೇರಿ ಇನ್ನುಳಿದ 11 ಪಂದ್ಯ ನವದೆಹಲಿಯಲ್ಲಿ ನಡೆಯಲಿದೆ.
ಬೆಂಗಳೂರಿನ ಎಂ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ನಡೆಯಲಿರುವ ಉದ್ಘಾಟನಾ ಪಂದ್ಯದಲ್ಲಿ ಹಾಲಿ ಚಾಂಪಿಯನ್ ಮುಂಬೈ ಇಂಡಿಯನ್ಸ್ ಹಾಗೂ ರನ್ನರ್ ಅಪ್ ಡೆಲ್ಲಿ ಕ್ಯಾಪಿಟಲ್ಸ್ ತಂಡಗಳು ಮುಖಾಮುಖಿಯಾಗಲಿದೆ. ಈ ಪಂದ್ಯವು ಸಂಜೆ 7.30ರಿಂದ ಆರಂಭವಾಗಲಿದೆ.
ಟೂರ್ನಿ ಡಬಲ್ ರೌಂಡ್ ರಾಬಿನ್ ಮಾದರಿಯಲ್ಲಿ ನಡೆಯಲಿದ್ದು, ಲೀಗ್ ಹಂತದಲ್ಲಿ ಪ್ರತಿ ತಂಡಗಳು 2 ಬಾರಿ ಪರಸ್ಪರ ಮುಖಾಮುಖಿಯಾಗಲಿವೆ. ಲೀಗ್ ಹಂತದಲ್ಲಿ ಅಗ್ರಸ್ಥಾನ ಪಡೆದ ತಂಡ ನೇರವಾಗಿ ಫೈನಲ್ಗೇರಲಿದ್ದು, 2 ಮತ್ತು 3ನೇ ಸ್ಥಾನಿಯಾದ ತಂಡಗಳು ಎಲಿಮಿನೇಟರ್ನಲ್ಲಿ ಸೆಣಸಲಿವೆ. ಗೆದ್ದ ತಂಡ ಪ್ರಶಸ್ತಿ ಸುತ್ತಿಗೇರಲಿದೆ.
ಇನ್ನು ಟೂರ್ನಿಯ ಉದ್ಘಾಟನಾ ಸಮಾರಂಭ ಅದ್ಧೂರಿಯಾಗಿ ನೆರವೇರಲಿದ್ದು, ಸಂಜೆ 6.30ಕ್ಕೆ ಸಮಾರಂಭ ಆರಂಭಗೊಳ್ಳಲಿದೆ. ಬಾಲಿವುಡ್ನ ಖ್ಯಾತ ನಟ ಶಾರುಖ್ ಖಾನ್, ಟೈಗರ್ ಶ್ರಾಫ್, ಶಾಹೀದ್ ಕಪೂರ್, ಸಿದ್ಧಾರ್ಥ್ ಮಲ್ಹೋತ್ರಾ, ವರುಣ್ ಧವನ್, ಆರ್ಯನ್ ಕಾರ್ತಿಕ್ ಸೇರಿದಂತೆ ಕಲಾವಿದರು, ಗಾಯಕರು ಪ್ರದರ್ಶನ ನೀಡಿ ಟೂರ್ನಿಯ ಮೆರುಗು ಹೆಚ್ಚಿಸಲಿದ್ದಾರೆ.