ಮುಂಬೈ, ಫೆ 20 (DaijiworldNews/ AK): ಟಿ20 ಕ್ರಿಕೆಟ್ ಕೂಟ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ನ 17ನೇ ಆವೃತ್ತಿಗೆ ಬಿಸಿಸಿಐ ಸಕಲ
ರೀತಿಯಲ್ಲಿ ಸಜ್ಜಾಗುತ್ತಿದೆ. ಇದೀಗ ಐಪಿಎಲ್ ಆಡಳಿತ ಮಂಡಳಿ ಅಧ್ಯಕ್ಷ ಅರುಣ್ ಧುಮಾಲ್ ಈ ಬಗ್ಗೆ ಮಾಹಿತಿ ನೀಡಿದ್ದು, ಈ ಬಾರಿಯ ಐಪಿಎಲ್ ಕೂಟವು ಮಾರ್ಚ್
22ರಂದು ಆರಂಭವಾಗಲಿದೆ ಎಂದರು.
ಚೆನ್ನೈ ನಲ್ಲಿ ಈ ಬಾರಿಯ ಪಂದ್ಯಾವಳಿ ಆರಂಭವಾಗಲಿದೆ. ಮಾರ್ಚ್ 22ರಂದು ಹಾಲಿ ಚಾಂಪಿಯನ್ ಚೆನ್ನೈ ಸೂಪರ್ ಕಿಂಗ್ಸ್ ತಂಡವು ರನ್ನರ್ ಅಪ್ ಗುಜರಾತ್ ಟೈಟಾನ್ಸ್ ತಂಡವನ್ನು ಚೆನ್ನೈ ನ ಎಂ.ಚಿದಂಬರಂ ಸ್ಟೇ ಡಿಯಂನಲ್ಲಿ ಎದುರಿಸಲಿದೆ ಎಂದರು.
ಎಪ್ರಿಲ್ -ಮೇ ತಿಂಗಳಿನಲ್ಲಿ ಲೋಕಸಭಾ ಚುನಾವಣೆ ನಡೆಯುವ ಕಾರಣ ಎರಡು ಹಂತದಲ್ಲಿ ಐಪಿಎಲ್ ವೇಳಾ ಪಟ್ಟಿ ಬಿಡುಗಡೆಯಾಗಲಿದೆ ಎಂದು ಅರುಣ್ ಧುಮಾಲ್ ಹೇಳಿದರು.
ಮೊದಲ 15 ದಿನದ ವೇಳಾ ಪಟ್ಟಿಯು ಮೊದಲು ಘೋಷಣೆಯಾಗಲಿದೆ. ಉಳಿದ ವೇಳಾ ಪಟ್ಟಿಯು ಲೋಕಸಭಾ ಚುನಾವಣೆಯ ಪಟ್ಟಿ ಬಿಡುಗಡೆಯಾದ ಬಳಿಕ ರಿಲೀಸ್ ಆಗಲಿದೆ ಎಂದು ಅವರು ತಿಳಿಸಿದರು.ಈ ಬಾರಿ ಸಂಪೂರ್ಣ ಐಪಿಎಲ್ ಪಂದ್ಯ ಭಾರತದಲ್ಲಿಯೇ ನಡೆಯಲಿದೆ ಎಂದು ಧುಮಾಲ್ ಹೇಳಿದರು.