ರಾಜ್ ಕೋಟ್, ಫೆ 18(DaijiworldNews/AA): ಟೀಂ ಇಂಡಿಯಾದ ಯುವ ಆರಂಭಿಕ ಆಟಗಾರ ಯಶಸ್ವಿ ಜೈಸ್ವಾಲ್ ಅವರು ಒಂದೇ ಇನ್ನಿಂಗ್ಸ್ನಲ್ಲಿ ಒಟ್ಟು 12 ಸಿಕ್ಸರ್ ಸಿಡಿಸುವ ಮೂಲಕ ಪಾಕಿಸ್ತಾನದ ಮಾಜಿ ಲೆಜೆಂಡರಿ ಕ್ರಿಕೆಟಿಗ ವಾಸಿಂ ಅಕ್ರಂ ಅವರ ದಾಖಲೆಯನ್ನು ಸರಿಗಟ್ಟಿ ವಿಶೇಷ ಸಾಧನೆ ಮಾಡಿದ್ದಾರೆ.
ರಾಜ್ ಕೋಟ್ ನಲ್ಲಿ ನಡೆದ ಭಾರತ ಹಾಗೂ ಇಂಗ್ಲೆಂಡ್ ನಡುವಿನ 3ನೇ ಟೆಸ್ಟ್ ಪಂದ್ಯದ ದ್ವಿತೀಯ ಇನಿಂಗ್ಸ್ ನಲ್ಲಿ ಯಶಸ್ವಿ ಜೈಸ್ವಾಲ್ ಅಂತಾರಾಷ್ಟ್ರೀಯ ಟೆಸ್ಟ್ ದ್ವಿಶತಕ ಸಿಡಿಸಿದ್ದಾರೆ. ಅವರು ಇನಿಂಗ್ಸ್ ಒಂದರಲ್ಲಿ ಅತಿ ಹೆಚ್ಚು ಸಿಕ್ಸರ್ ಸಿಡಿಸಿದ ವಿಶ್ವದ 2ನೇ ಆಟಗಾರ ಮತ್ತು ಇಂಗ್ಲೆಂಡ್ ವಿರುದ್ಧ ದ್ವಿಶತಕ ಸಿಡಿಸಿದ ಟೀಂ ಇಂಡಿಯಾದ ಮೊದಲ ಆಟಗಾರ ಎಂಬ ಹೆಗ್ಗಳಿಕೆಗೂ ಪಾತ್ರರಾಗಿದ್ದಾರೆ.
ಇನ್ನು 1996ರಲ್ಲಿ ಜಿಂಬಾಬ್ವೆ ವಿರುದ್ಧ ಪಾಕ್ ಮಾಜಿ ಕ್ರಿಕೆಟಿಗ ವಾಸಿಂ ಅಕ್ರಂ ಅವರು, 12 ಸಿಕ್ಸರ್ ಸಿಡಿಸಿದ್ದರು. ಇದು ಈವರೆಗಿನ ದಾಖಲೆಯಾಗಿತ್ತು. ಜೊತೆಗೆ ಈ ಹಿಂದೆ ಮಯಾಂಕ್ ಅಗರ್ವಾಲ್ ಹಾಗೂ ನವಜೋತ್ ಸಿಂಗ್ ಸಿಧು ಅವರ ಹೆಸರಿನಲ್ಲಿ 8 ಸಿಕ್ಸರ್ ಗಳ ಜಂಟಿ ದಾಖಲೆ ಇತ್ತು. ಇದೀಗ ಯಶಸ್ವಿ ಜೈಸ್ವಾಲ್ ಅವರು 12 ಸಿಕ್ಸರ್ ಸಿಡಿಸುವ ಮೂಲಕ ಅವರಿಬ್ಬರ ದಾಖಲೆಯನ್ನು ಸಹ ಸರಿಗಟ್ಟಿದ್ದಾರೆ.