ತ್ರಿಪುರ, ಜ 31 (DaijiworldNews/AA): ಕರ್ನಾಟಕ ತಂಡದ ನಾಯಕ ಮಯಾಂಕ್ ಅಗರ್ವಾಲ್ ಅವರು ವಿಷ ಪೂರಿತ ದ್ರವ ಸೇವಿಸಿದ ಪರಿಣಾಮ ಮುಂದಿನ 48 ಗಂಟೆಗಳವರೆಗೆ ಮಾತನಾಡಲಆಗುವುದಿಲ್ಲ ಎಂದು ತಿಳಿದುಬಂದಿದೆ.
ರಣಜಿ ಪಂದ್ಯವಾಡಲು ತ್ರಿಪುರದ ಅಗರ್ತಲದಿಂದ ಸೂರತ್ಗೆ ಇಂಡಿಗೋ ವಿಮಾನದಲ್ಲಿ ತೆರಳುತ್ತಿದ್ದ ವೇಳೆ ವಿಮಾನದಲ್ಲಿ ಇರಿಸಲಾಗಿದ್ದ ವಿಷಕಾರಿ ದ್ರವವನ್ನು ಮಯಾಂಕ್ ನೀರೆಂದು ಸೇವಿಸಿದ್ದರು. ಸೇವಿಸಿದ ಬೆನ್ನಲ್ಲೇ ಅಸ್ವಸ್ಥಗೊಂಡಿದ್ದ ಅವರನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗಿತ್ತು.
ಪ್ರಸ್ತುತ ಮಯಾಂಕ್ ಚೇತರಿಸಿಕೊಂಡಿದ್ದು, ಅವರ ಬಾಯಲ್ಲಿ ಉರಿ ಊತ ಹಾಗೂ ಹುಣ್ಣುಗಳು ಕಾಣಿಸಿಕೊಂಡಿವೆ. ಆದ್ದರಿಂದ 48 ಗಂಟೆಗಳವರೆಗೆ ಮಾತನಾಡಲು ಸಾಧ್ಯವಾಗುವುದಿಲ್ಲ ಎಂದು ವರದಿ ತಿಳಿಸಿದೆ. ಇದೀಗ ವೈದ್ಯಕೀಯ ವರದಿ ಬಂದ ಬೆನ್ನಲ್ಲೇ ಮಯಾಂಕ್ ಅವರ ಮ್ಯಾನೇಜರ್ ಎನ್ ಸಿಸಿಪಿಎಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ಹೆಚ್ಚಿನ ಚಿಕಿತ್ಸೆಗಾಗಿ ಮಯಾಂಕ್ ಅವರನ್ನು ತ್ರಿಪುರದಿಂದ ಬೆಂಗಳೂರಿಗೆ ಶಿಫ್ಟ್ ಮಾಡಲಾಗಿದೆ. ಹೆಚ್ಚಿನ ಚಿಕಿತ್ಸೆಯನ್ನು ಬೆಂಗಳೂರಿನಲ್ಲೇ ಪಡೆದುಕೊಳ್ಳುವ ಅವರು ಬೆಂಗಳೂರು ವಿಮಾನ ನಿಲ್ದಾಣದಿಂದ ಮನೆಗೆ ತೆರಳಿದ್ದು, ನಾಳೆ ವೈದ್ಯರನ್ನು ಸಂಪರ್ಕಿಸಲಿದ್ದಾರೆ. ಹಾಗೂ ಥ್ರೋಟ್ ಇನ್ಪೇಕ್ಷನ್ ನಿಂದಾಗಿ ಅವರಿಗೆ ಮಾತನಾಡಲು ಸಾಧ್ಯವಾಗುತ್ತಿಲ್ಲ ಎಂದು ಮಯಾಂಕ್ ಅವರ ಮ್ಯಾನೇಜರ್ ತಿಳಿಸಿದ್ದಾರೆ.