ನವದೆಹಲಿ, ಜ 25 (DaijiworldNews/HR): ಸ್ಟಾರ್ ಇಂಡಿಯಾ ಬಾಕ್ಸರ್ ಮಾಂಗ್ಟೆ ಚುಂಗ್ನೈಜಾಂಗ್ ಮೇರಿ ಕೋಮ್ ಬಾಕ್ಸಿಂಗ್ಗೆ ನಿವೃತ್ತಿ ಘೋಷಿಸಿದ್ದಾರೆ ಎಂಬ ಸುದ್ದಿ ಹಬ್ಬಿದ್ದು, ಈ ಕುರಿತಾಗಿ ಸ್ಪಷ್ಟನೆ ನೀಡಿರುವ ಅವರು, ನಾನು ಇನ್ನೂ ನಿವೃತ್ತಿ ಘೋಷಿಸಿಲ್ಲ. ನಾನು ನಿವೃತ್ತಿ ಹೊಂದಲು ಬಯಸಿದಾಗ ವೈಯಕ್ತಿಕವಾಗಿ ಮಾಧ್ಯಮಗಳ ಮುಂದೆ ಬರುತ್ತೇನೆ ಎಂದಿದ್ದಾರೆ.
ಆರು ಬಾರಿಯ ವಿಶ್ವ ಚಾಂಪಿಯನ್ ಮತ್ತು 2012ರ ಒಲಿಂಪಿಕ್ ಪದಕ ವಿಜೇತೆಯಾಗಿರುವ ಮೇರಿ ಕೋಮ್ ಅವರು ನಿವೃತ್ತಿ ಕುರಿತು ಪ್ರತಿಕ್ರಿಯಿಸಿ, ನಾನು ನಿವೃತ್ತಿ ಘೋಷಿಸಿದ್ದೇನೆ ಎಂದು ಕೆಲವು ಮಾಧ್ಯಮಗಳಲ್ಲಿ ತಪ್ಪಾಗಿ ವರದಿಯಾಗಿದ್ದು, ಇದು ನಿಜವಲ್ಲ' ಎಂದು ಸ್ಪಷ್ಟನೆ ನೀಡಿದ್ದಾರೆ.
ಜನವರಿ 24ರಂದು ಅಸ್ಸಾಂನ ದಿಬ್ರುಗಢ ಸಮೀಪದ ಶಾಲೆಯೊಂದರಲ್ಲಿ ನಡೆದ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದೆ. ಅಲ್ಲಿ ಮಕ್ಕಳನ್ನು ಉದ್ದೇಶಿಸಿ ಮಾತನಾಡುವಾಗ ನನಗೆ ಇನ್ನೂ ಕ್ರೀಡೆಗಳಲ್ಲಿ ಸಾಧಿಸುವ ಹಸಿವು ಇದೆ. ಆದರೆ ಒಲಿಂಪಿಕ್ಸ್ನಲ್ಲಿ ವಯಸ್ಸಿನ ಮಿತಿಯು ಕಾರಣ ನನಗೆ ಭಾಗವಹಿಸಲು ಅವಕಾಶ ನೀಡುವುದಿಲ್ಲ ಎಂದು ನಾನು ಹೇಳಿದ್ದೆ. ಆದರೆ ನಿವೃತ್ತಿ ಘೋಷಣೆ ಮಾಡಿಲ್ಲ ಎಂದು ತಿಳಿಸಿದ್ದಾರೆ.