ದುಬೈ, ಜ 24 (DaijiworldNews/PC): ಟಿ20 ಕ್ರಿಕೆಟ್ನಲ್ಲಿ ಅಮೋಘ ಸಾಧನೆ ಮಾಡಿರುವ ಭಾರತದ ಬ್ಯಾಟರ್ ಸೂರ್ಯಕುಮಾರ್ ಯಾದವ್, ಸತತ ಎರಡನೇ ಬಾರಿಗೆ 'ಐಸಿಸಿ ವರ್ಷದ ಟ್ವೆಂಟಿ-20 ಅಂತರರಾಷ್ಟ್ರೀಯ ಕ್ರಿಕೆಟಿಗ ಪ್ರಶಸ್ತಿ'ಗೆ ಆಯ್ಕೆಯಾಗಿದ್ದಾರೆ.
2023ರಲ್ಲಿ ಸೂರ್ಯಕುಮಾರ್ ಟಿ20ಐ ಕ್ರಿಕೆಟ್ನಲ್ಲಿ ಅತ್ಯುತ್ತಮ ಬ್ಯಾಟಿಂಗ್ ಪ್ರದರ್ಶನ ತೋರಿದ್ದರು. ಇವರು ಆಡಿದ್ದ 17 ಇನಿಂಗ್ಸ್ಗಳಿಂದ 48.86ರ ಸರಾಸರಿ ಮತ್ತು 155.95ರ ಸ್ಟ್ರೈಕ್ ರೇಟ್ನಲ್ಲಿ 733 ರನ್ಗಳನ್ನು ದಾಖಲಿಸಿದ್ದರು. ಇದರಲ್ಲಿ ಅವರು 2 ಶತಕಗಳು ಹಾಗೂ 4 ಅರ್ಧಶತಕಗಳನ್ನು ಸಿಡಿಸಿದ್ದರು.
ಆಸ್ಟ್ರೇಲಿಯಾ ವಿರುದ್ಧ 42 ಎಸೆತಗಳಲ್ಲಿ 80 ರನ್ ಸಿಡಿಸಿದ್ದ ಸೂರ್ಯಕುಮಾರ್ ಯಾದವ್ ಅವರು ದಕ್ಷಿಣ ಆಫ್ರಿಕಾ ವಿರುದ್ಧ 36 ಎಸೆತಗಳಲ್ಲಿ 56 ರನ್ಗಳನ್ನು ಗಳಿಸಿದ್ದರು. ನಂತರ ಜೋಹನ್ಸ್ಬರ್ಗ್ನಲ್ಲಿ ನಡೆದಿದ್ದ ಮೂರನೇ ಟಿ20 ಪಂದ್ಯದಲ್ಲಿ ಕೇವಲ 56 ಎಸೆತಗಳಲ್ಲಿ ಸೂರ್ಯ ಶತಕ ಸಿಡಿಸಿದ್ದರು. ಕಳೆದ ವರ್ಷದ ಟಿ20ಐ ಕ್ರಿಕೆಟ್ನಲ್ಲಿ ಎರಡನೇ ಅತ್ಯಂತ ವೇಗದ ಶತಕವನ್ನು ಸಿಡಿಸಿದ್ದರು. ಶ್ರೀಲಂಕಾ ವಿರುದ್ಧದ ಪಂದ್ಯದಲ್ಲಿ ಅವರು ಕೇವಲ 45 ಎಸೆತಗಳಲ್ಲಿ ಶತಕವನ್ನು ಸಿಡಿಸಿದ್ದರು. ಆ ಮೂಲಕ ರೋಹಿತ್ ಶರ್ಮಾ ಬಳಿಕ ಟಿ20ಐ ಕ್ರಿಕೆಟ್ನಲ್ಲಿ ವೇಗದ ಶತಕ ಸಿಡಿಸಿದ ಎರಡನೇ ಬ್ಯಾಟ್ಸ್ಮನ್ ಎನಿಸಿಕೊಂಡಿದ್ದರು.
ಐಸಿಸಿ ಪ್ರಕಟಣೆಯು ಭಾರತ ಕ್ರಿಕೆಟ್ ತಂಡದ ಪರ ಮಧ್ಯಮ ಕ್ರಮಾಂಕದಲ್ಲಿ ಆಡಿ ಸೂರ್ಯಕುಮಾರ್ ಯಾದವ್ ಅನೇಕ ಪಂದ್ಯಗಳನ್ನು ಗೆಲ್ಲಿಸಿಕೊಟ್ಟಿದ್ದಾರೆ ಎಂದು ತಿಳಿಸಿದೆ.