ಕೊಲಂಬೊ, ಜ 4(DaijiworldNews/Sk): ಶ್ರೀಲಂಕಾ ಕ್ರಿಕೆಟ್ ಮಂಡಳಿಯು ತಮ್ಮ ಟೆಸ್ಟ್ ತಂಡದ ನಾಯಕತ್ವದಲ್ಲಿ ಮಹತ್ವದ ಬದಲಾವಣೆಯನ್ನು ಮಾಡಿದ್ದು, ಯುವ ಆಲ್ರೌಂಡರ್ ಧನಂಜಯ ಡಿಸಿಲ್ವಾ ಅವರನ್ನು ಟೆಸ್ಟ್ ತಂಡದ ನೂತನ ನಾಯಕರಾಗಿ ಆಯ್ಕೆಮಾಡಿದೆ.
ಕೆಲ ದಿನಗಳ ಹಿಂದೆಯಷ್ಟೇ ಶ್ರೀಲಂಕಾ ಟಿ20 ತಂಡಕ್ಕೆ ವಾನಿಂದು ಹಸರಂಗ ಮತ್ತು ಏಕದಿನ ತಂಡಕ್ಕೆ ಕುಸಾಲ್ ಮೆಂಡಿಸ್ ಅವರನ್ನು ನಾಯಕರನ್ನಾಗಿಸಿ ನೇಮಿಸಿತ್ತು. ಇದೀಗ ದಿಮುತ್ ಕರುಣಾರತ್ನೆ ಅವರಿಂದ ನಾಯಕತ್ವ ಪಡೆದು 32 ವರ್ಷದ ಧನಂಜಯ ಡಿಸಿಲ್ವ ಅವರು ಲಂಕಾ ಟೆಸ್ಟ್ ತಂಡ ಮುನ್ನಡೆಸುವ 12ನೇ ಆಟಗಾರನಾಗಿದ್ದಾರೆ.
ಟೆಸ್ಟ್ ತಂಡಕ್ಕೆ ಹೊಸದಾಗಿ ನೇಮಕಗೊಂಡ ನಾಯಕ ಧನಂಜಯ ಡಿ ಸಿಲ್ವಾ ಅವರು ತಮ್ಮ 51 ಟೆಸ್ಟ್ ಪಂದ್ಯಗಳಿಂದ 10 ಶತಕಗಳು ಮತ್ತು 13 ಅರ್ಧಶತಕಗಳನ್ನು ಗಳಿಸಿದ ಅನುಭವನ್ನು ಹೊಂದಿದ್ದಾರೆ. ಇನ್ನು ಇವರ ಮೊದಲ ಸವಾಲು ಫೆ. 6ರಂದು ಪ್ರಾರಂಭವಾಗಲಿದ್ದು, ಏಕೈಕ ಟೆಸ್ಟ್ ಪಂದ್ಯದಲ್ಲಿ ಅಫ್ಘಾನಿಸ್ತಾನ ತಂಡದ ವಿರುದ್ಧ ಆಡಲಿದ್ದಾರೆ. ಇದರೊಂದಿಗೆ ನಾಯಕತ್ವದಲ್ಲಿ ಬದಲಾವಣೆಯನ್ನು ಮಾಡಿರುವ ಶ್ರೀಲಂಕಾ ತಂಡವು ಧನಂಜಯ ಡಿಸಿಲ್ವಾ ಅವರ ನಾಯಕತ್ವ ಕೌಶಲ್ಯಗಳನ್ನು ಎದುರು ನೋಡುತ್ತಿದೆ.