ಮುಂಬೈ, ಡಿ 22 ( DaijiworldNews/MR): ಭಾರತೀಯ ಕ್ರಿಕೆಟ್ ತಂಡದ ಸೂಪರ್ ಸ್ಟಾರ್ ಆಟಗಾರ ವಿರಾಟ್ ಕೊಹ್ಲಿ ಅವರು ದಕ್ಷಿಣ ಆಫ್ರಿಕಾ ಕೌಟುಂಬಿಕ ತುರ್ತುಪರಿಸ್ಥಿತಿಯಿಂದಾಗಿ ದಿಢೀರ್ ಭಾರತಕ್ಕೆ ಮರಳಿದ್ದಾರೆ. ಬೆರಳಿನ ಗಾಯಕ್ಕೀಡಾದ ಯುವ ಬ್ಯಾಟರ್ ಋತುರಾಜ್ ಗಾಯಕ್ವಾಡ್ ಟೆಸ್ಟ್ ಸರಣಿಯಿಂದ ಹೊರಬಿದ್ದಾರೆ.
ಟೆಸ್ಟ್ ಸರಣಿಗಾಗಿ ಆರಂಭಕ್ಕೂ 10 ದಿನ ಮುಂಚಿತವಾಗಿ ಕೊಹ್ಲಿ ದಕ್ಷಿಣ ಆಫ್ರಿಕಾಕ್ಕೆ ತೆರಳಿದ್ದರು. ಅಲ್ಲದೇ ಅಭ್ಯಾಸ ಕೂಡ ಆರಂಭಿಸಿದ್ದರು. ಇದೀಗ ಕೊಹ್ಲಿ ಕೌಟುಂಬಿಕ ತುರ್ತುಪರಿಸ್ಥಿತಿಯಿಂದಾಗಿ ಮತ್ತೆ ಭಾರತಕ್ಕೆ ಮರಳಿದ್ದಾರೆ ಎಂದು ತಿಳಿದುಬಂದಿದೆ.
ಟೆಸ್ಟ್ ಸರಣಿಯ ಆರಂಭಕ್ಕೆ ಕೇವಲ 4 ದಿನಗಳ ಮೊದಲು ವಿರಾಟ್ ಮನೆಗೆ ಮರಳಲು ಕಾರಣವಾದ 'ಕೌಟುಂಬಿಕ ತುರ್ತು' ಏನು ಎಂಬುದು ಇನ್ನೂಬಹಿರಂಗವಾಗಿಲ್ಲ. ಆದರೆ, ಟೆಸ್ಟ್ ಸರಣಿ ಪ್ರಾರಂಭವಾಗುವ ಮೊದಲು ತಂಡಕ್ಕೆ ಮರಳುವ ಬಗ್ಗೆ ಕೊಹ್ಲಿ ಬಿಸಿಸಿಐಗೆ ಭರವಸೆ ನೀಡಿರುವುದರಿಂದ ಕೌಟುಂಬಿಕ ತುರ್ತು ಅಷ್ಟೊಂದು ಗಂಭೀರವಾಗಿರಲಿಕ್ಕಿಲ್ಲ ಎಂಬುವುದು ಅಭಿಮಾನಿಗಳ ಲೆಕ್ಕಚಾರವಾಗಿದೆ
ಇನ್ನು ಡಿಸೆಂಬರ್ 19 ರಂದು ಪೋರ್ಟ್ ಎಲಿಜಬೆತ್ನಲ್ಲಿ ನಡೆದ ಎರಡನೇ ಏಕದಿನ ಪಂದ್ಯದಲ್ಲಿ ಬೆರಳಿನ ಗಾಯಕ್ಕೀಡಾಗ 26 ವರ್ಷ ವರ್ಷದ ಗಾಯಕ್ವಾಡ್ ಟೆಸ್ಟ್ ಸರಣಿಯಿಂದ ಸಂಪೂರ್ಣವಾಗಿ ಹೊರಬಿದ್ದಿದ್ದಾರೆ. ಫೀಲ್ಡಿಂಗ್ ಮಾಡುವಾಗ ಗಾಯಕ್ವಾಡ್ ಬೆರಳಿಗೆ ಗಾಯ ಮಾಡಿಕೊಂಡಿದ್ದರು. ಹೀಗಾಗಿ ಅವರು ಅಂತಿಮ ಏಕದಿನ ಪಂದ್ಯದಿಂದ ಹೊರಗುಳಿದಿದ್ದರು. ಅವರ ಸ್ಥಾನದಲ್ಲಿ ರಜತ್ ಪಾಟೀದಾರ್ ಅವರು ಕಣಕ್ಕಿಳಿದ್ದರು.