ಕೋಲ್ಕತ್ತ, ನ. 5 (DaijiworldNews/SK): ಕ್ರಿಕೆಟ್ ಲೋಕದ ಕಿಂಗ್ ಎಂದೇ ಖ್ಯಾತಿ ಗಳಿಸಿರುವ ಟೀಂ ಇಂಡಿಯಾದ ಮಾಜಿ ನಾಯಕ ವಿರಾಟ್ ಕೊಹ್ಲಿ ಏಕದಿನ ವಿಶ್ವಕಪ್ನಲ್ಲಿ ದಾಖಲೆಯ ಶತಕ ಸಿಡಿಸಿದ್ದಾರೆ. ದಕ್ಷಿಣ ಆಫ್ರಿಕಾ ವಿರುದ್ಧ 119 ಎಸೆತಗಳನ್ನು ಎದುರಿಸಿದ ವಿರಾಟ್ 10 ಬೌಂಡರಿ ಸಹಿತ ತಮ್ಮ ಶತಕ ಪೂರೈಸಿದರು.
ಈ ಶತಕದೊಂದಿಗೆ ವಿರಾಟ್ ಏಕದಿನ ಕ್ರಿಕೆಟ್ನಲ್ಲಿ ಅತಿ ಹೆಚ್ಚು 49 ಶತಕ ಸಿಡಿಸಿದ್ದ ಕ್ರಿಕೆಟ್ ದೇವರು ಸಚಿನ್ ತೆಂಡೂಲ್ಕರ್ ಅವರ ದಾಖಲೆಯನ್ನು ಸರಿಗಟ್ಟಿದ್ದಾರೆ. ಸಚಿನ್ ತೆಂಡೂಲ್ಕರ್ 452 ಇನ್ನಿಂಗ್ಸ್ಗಳಲ್ಲಿ 49 ಶತಕಗಳನ್ನು ಸಿಡಿಸಿದ ಸಾಧನೆ ಮಾಡಿದರೆ.ವಿರಾಟ್ ಕೊಹ್ಲಿ ಕೇವಲ 277 ಇನ್ನಿಂಗ್ಸ್ಗಳಲ್ಲೇ ಈ ಸಾಧನೆ ಮಾಡಿ ಸೈ ಎನಿಸಿಕೊಂಡಿದ್ದಾರೆ.
ಕೋಲ್ಕತ್ತಾದ ಪಿಚ್ ಬ್ಯಾಟಿಂಗ್ಗೆ ಅಷ್ಟು ಸುಲಭವಾಗಿರಲಿಲ್ಲ. ನಾಯಕ ರೋಹಿತ್ ಶರ್ಮಾ ಔಟಾದ ಬಳಿಕ ಕ್ರೀಸ್ಗೆ ಬಂದ ವಿರಾಟ್ ಆಫ್ರಿಕನ್ನ್ ಸ್ಪಿನ್ನರ್ಗಳ ದಾಳಿಯನ್ನು ಸಮರ್ಥವಾಗಿ ಎದುರಿಸಿದರು.ವಿರಾಟ್ ಜೊತೆಯಾದ ಶ್ರೇಯಸ್ ಅಯ್ಯರ್ 134 ರನ್ಗಳ ಜೊತೆಯಾಟ ನಡೆಸಿದರು.
ಇದೇ ವೇಳೆ ವಿರಾಟ್ ಕೊಹ್ಲಿ 67 ಎಸೆತಗಳಲ್ಲಿ 5 ಬೌಂಡರಿಗಳ ನೆರವಿನಿಂದ ಅರ್ಧಶತಕ ಪೂರೈಸಿದರು. ಈ ಅರ್ಧಶತಕದೊಂದಿಗೆ ವಿರಾಟ್ ತವರು ನೆಲದಲ್ಲಿ 6000 ಏಕದಿನ ರನ್ ಪೂರೈಸುವ ಮೂಲಕ ತಮ್ಮ 35ನೇ ವರ್ಷದ ಹುಟ್ಟುಹಬ್ಬದ ದಿನದಂದು ಫ್ಯಾನ್ಸ್ಗೆ ಬಂಪರ್ ಗಿಫ್ಟ್ ಕೊಟ್ಟಿದ್ದಾರೆ.