ಪುಣೆ,ಅ. 30 (DaijiworldNews/AK): ಎಂಸಿಎ ಸ್ಟೇಡಿಯಂನಲ್ಲಿ ನಡೆದ ಏಕದಿನ ವಿಶ್ವಕಪ್ನ 30ನೇ ಪಂದ್ಯದಲ್ಲಿ ಶ್ರೀಲಂಕಾ ವಿರುದ್ಧ ಅಫ್ಘಾನಿಸ್ತಾನ್ ತಂಡ ಭರ್ಜರಿ ಜಯ ಸಾಧಿಸಿದೆ.
ಈ ಪಂದ್ಯದಲ್ಲಿ ಟಾಸ್ ಗೆದ್ದ ಅಫ್ಘಾನಿಸ್ತಾನ್ ಮೊದಲು ಬೌಲಿಂಗ್ ಆಯ್ಕೆ ಮಾಡಿತು. ಅದರಂತೆ ಇನಿಂಗ್ಸ್ ಆರಂಭಿಸಿದ ಶ್ರೀಲಂಕಾ ತಂಡ ಉತ್ತಮ ಆರಂಭ ಪಡೆದಿರಲಿಲ್ಲ. ಆರಂಭಿಕ ಆಟಗಾರ ದಿಮುತ್ ಕರುಣರತ್ನೆ ಕೇವಲ 15 ರನ್ಗಳಿಸಿ ಔಟ್ ಆದರು. ಬಳಿಕ ಜೊತೆಯಾದ ಪಾತುಮ್ ನಿಸ್ಸಂಕಾ (46) ಹಾಗೂ ಕುಸಾಲ್ ಮೆಂಡಿಸ್ (39) ರನ್ ಪಡೆದರು.
ಇನ್ನು ಸದೀರ ಸಮರವಿಕ್ರಮ 36 ರನ್ ಬಾರಿಸಿದರೆ, ಅಂತಿಮ ಹಂತದಲ್ಲಿ ಬಿರುಸಿನ ಬ್ಯಾಟಿಂಗ್ ಪ್ರದರ್ಶಿಸಿದ ಮಹೀಶ್ ತೀಕ್ಷಣ 29 ರನ್ಗಳ ಕೊಡುಗೆ ನೀಡಿದರು. ಇದರ ಪರಿಣಾಮ ಶ್ರೀಲಂಕಾ ತಂಡವು 49.3 ಓವರ್ಗಳಲ್ಲಿ 241 ರನ್ಗಳಿಸಿ ಆಲೌಟ್ ಆಯಿತು.
242 ರನ್ಗಳ ಸುಲಭ ಗುರಿ ಪಡೆದ ಅಫ್ಘಾನಿಸ್ತಾನ್ ತಂಡ ಕೂಡ ಆರಂಭದಲ್ಲಿ ಎಡವಿತ್ತು. ದಿಲ್ಶನ್ ಮಧುಶಂಕ ಎಸೆತದಲ್ಲಿ ಕ್ಲೀನ್ ಬೌಲ್ಡ್ ಆಗುವ ಮೂಲಕ ರಹಮಾನುಲ್ಲಾ ಗುರ್ಬಾಝ್ ಶೂನ್ಯಕ್ಕೆ ಔಟಾದರು.
ಆದರೆ ಇಬ್ರಾಹಿಂ ಝದ್ರಾನ್ 39 ರನ್ ಬಾರಿಸಿದರೆ, ರಹಮತ್ ಶಾ 62 ರನ್ಗಳಿಸಿದರು ಇದಾದ ಬಳಿಕ ಕಣಕ್ಕಿಳಿದ ನಾಯಕ ಹಶ್ಮತ್ ಶಾಹಿದಿ 58 ಹಾಗೂ ಅಝ್ಮತ್ ಒಮರ್ಝಾಹಿ73 ಅರ್ಧಶತಕ ಬಾರಿಸಿ ಮಿಂಚಿದರು. ಹೀಗಾಗಿ 45.2 ಓವರ್ಗಳಲ್ಲಿ ಗೆಲುವಿನತ್ತ ಮುಖ ಮಾಡಿದರು. ಅಫ್ಘಾನಿಸ್ತಾನ್ ತಂಡ 7 ವಿಕೆಟ್ಗಳ ಭರ್ಜರಿ ಜಯ ಸಾಧಿಸಿದೆ.