ನವದೆಹಲಿ, ಸೆ. 05 (DaijiworldNews/SM): ಸೆಪ್ಟೆಂಬರ್ 5ರಂದು ಲಾಹೋರ್ನ ಗಡಾಫಿ ಸ್ಟೇಡಿಯಂನಲ್ಲಿ ನಡೆದ 2023ರ ಏಷ್ಯಾ ಕಪ್ ಪಂದ್ಯಾವಳಿಯ 6ನೇ ಪಂದ್ಯದಲ್ಲಿ ಅಫ್ಘಾನಿಸ್ತಾನ ತಂಡದ ವಿರುದ್ಧ ಶ್ರೀಲಂಕಾ ತಂಡವು ರೋಚಕ ಗೆಲುವು ಸಾಧಿಸಿ ಸೂಪರ್ 4 ಹಂತಕ್ಕೆ ಅರ್ಹತೆ ಪಡೆಯಿತು.
ಮೊದಲು ಬ್ಯಾಟಿಂಗ್ ಮಾಡಿದ ದಸುನ್ ಶನಕ ನಾಯಕತ್ವದ ಶ್ರೀಲಂಕಾ ತಂಡ ಕುಸಾಲ್ ಮೆಂಡೀಸ್ ಅವರ ಅರ್ಧಶತಕದ ನೆರವಿನಿಂದ 50 ಓವರ್ಗಳಲ್ಲಿ 8 ವಿಕೆಟ್ ಕಳೆದುಕೊಂಡು 291 ರನ್ ಗಳಿಸಿತು.
292 ರನ್ಗಳ ಸವಾಲಿನ ಗೆಲುವಿನ ಗುರಿ ಪಡೆದು ಎರಡನೇ ಇನ್ನಿಂಗ್ಸ್ ಆರಂಭಿಸಿದ ಅಫ್ಘಾನಿಸ್ತಾನ ತಂಡ 37.4 ಓವರ್ಗಳಲ್ಲಿ 289 ರನ್ ಗಳಿಸಿ ಸರ್ವಪತನ ಕಂಡಿತು. ಗೆಲುವಿಗೆ ಕೇವಲ 2 ರನ್ಗಳು ಬೇಕಾಗಿದ್ದಾಗ ಫಜಲ್ಹಕ್ ಫಾರೂಕಿ ಧನಂಜಯ್ ಡಿ ಸಿಲ್ವಾ ಬೌಲಿಂಗ್ನಲ್ಲಿ ಎಲ್ಬಿಡಬ್ಲ್ಯೂ ಆದರು. ಇದು ಅಫ್ಘಾನಿಸ್ತಾನ ತಂಡಕ್ಕೆ ದೊಡ್ಡ ನಿರಾಸೆ ತರಿಸಿತು.
ಇನ್ನೇನು ಗೆದ್ದೆಬಿಟ್ಟೆವು ಅಂದುಕೊಳ್ಳುವಷ್ಟರಲ್ಲಿ ಅನಿರೀಕ್ಷಿತ ಸೋಲು ಕಂಡು ಅಪ್ಘಾನಿಸ್ತಾನ ತಂಡ 2023ರ ಏಷ್ಯಾ ಕಪ್ ಪಂದ್ಯಾವಳಿಯಿಂದ ಹೊರಬಿತ್ತು ಮತ್ತು ಶ್ರೀಲಂಕಾ ತಂಡದ ಜೊತೆಗೆ ಬಾಂಗ್ಲಾದೇಶ ತಂಡ ಸೂಪರ್ 4ಗೆ ಅರ್ಹತೆ ಪಡೆದುಕೊಂಡಿತು.
ಶ್ರೀಲಂಕಾ ತಂಡದ ಪರ ಬ್ಯಾಟಿಂಗ್ನಲ್ಲಿ ಆರಂಭಿಕರಾದ ಪಾಥುಮ್ ನಿಸ್ಸಾಂಕ 40 ಎಸೆತಗಳಲ್ಲಿ 6 ಬೌಂಡರಿ ಸಮೇತ 41 ರನ್ ಮತ್ತು ದಿಮುತ್ ಕರುಣಾರತ್ನೆ 35 ಎಸೆತಗಳಲ್ಲಿ 6 ಬೌಂಡರಿ ಮೂಲಕ 32 ರನ್ ಗಳಿಸಿ ಮೊದಲ ವಿಕೆಟ್ಗೆ 10.2 ಓವರ್ಗಳಲ್ಲಿ 63 ರನ್ ಜೊತೆಯಾಟ ನೀಡಿದರು.
ನಂತರ ಬಂದ ಕುಸಾಲ್ ಮೆಂಡೀಸ್ 84 ಎಸೆತಗಳಲ್ಲಿ 6 ಬೌಂಡರಿ ಮತ್ತು 3 ಸಿಕ್ಸರ್ ಸಮೇತ 92 ರನ್ ಬಾರಿಸಿದರು. ಸಮರವಿಕ್ರಮ 3 ರನ್, ಚರಿತ ಅಸಲಂಕ 36 ರನ್, ಧನಂಜಯ್ ಡಿ ಸಿಲ್ವಾ 14 ರನ್, ದಸುನ್ ಶನಕ 5 ರನ್, ದುನಿತ್ ವೆಲ್ಲಾಲಗೆ 33 ರನ್ ಮತ್ತು ಮಹೀಶ್ ತೀಕ್ಷಣ 28 ರನ್ ಗಳಿಸಿ ತಂಡದ ಮೊತ್ತವನ್ನು 290ಕ್ಕೆ ಏರಿಸಿದರು.