ನವದೆಹಲಿ, ಆ 13 (DaijiworldNews/SM): ಸಾಮಾನ್ಯವಾಗಿ ಫುಟ್ಬಾಲ್ ಅಂಗಳದಲ್ಲಿ ಕಂಡು ಬರುವ ರೆಡ್ ಕಾರ್ಡ್ ನಿಯಮವನ್ನು ಕ್ರಿಕೆಟ್ನಲ್ಲಿ ಪರಿಚಯಿಸಲಾಗುತ್ತಿದೆ. ಮುಂಬರುವ ಕೆರಿಬಿಯನ್ ಪ್ರೀಮಿಯರ್ ಲೀಗ್ನಲ್ಲಿ (CPL 2023) ರೆಡ್ ಕಾರ್ಡ್ ನಿಯಮ ಜಾರಿಗೆ ಬರಲಿದ್ದು, ಇದರಿಂದ ಪಂದ್ಯವು ಮತ್ತಷ್ಟು ರೋಚಕವಾಗಲಿದೆ. ಈ ನಿಯಮದ ಪ್ರಕಾರ ಸ್ಲೋ ಓವರ್ ರೇಟ್ಗಾಗಿ ಫೀಲ್ಡಿಂಗ್ ತಂಡ ಓರ್ವ ಫೀಲ್ಡರ್ನನ್ನು ಕಳೆದುಕೊಳ್ಳಬಹುದು. ಹಾಗೆಯೇ ಬ್ಯಾಟಿಂಗ್ ತಂಡಕ್ಕೆ 5 ರನ್ಗಳ ಪೆನಾಲ್ಟಿ ಕೂಡ ಬೀಳಬಹುದು.
ಅಂತಾರಾಷ್ಟ್ರೀಯ ಟಿ20 ಕ್ರಿಕೆಟ್ ನಿಯಮದಂತೆ ಸಿಪಿಎಲ್ನಲ್ಲೂ ಒಂದು ಇನಿಂಗ್ಸ್ಗೆ 85 ನಿಮಿಷಗಳನ್ನು ನಿಗದಿ ಮಾಡಲಾಗಿದೆ.
ಇಲ್ಲಿ ಬೌಲಿಂಗ್ ತಂಡವು 17ನೇ ಓವರ್ ಅನ್ನು 72 ನಿಮಿಷ ಮತ್ತು 15 ಸೆಕೆಂಡುಗಳಲ್ಲಿ ಮುಗಿಸಬೇಕಾಗಿದೆ. ಈ ಸಮಯದೊಳಗೆ 17 ಓವರ್ ಮುಗಿಸಲು ವಿಫಲವಾದರೆ ಬೌಂಡರಿ ಲೈನ್ನಿಂದ ಓರ್ವ ಫೀಲ್ಡರ್ ಅನ್ನು 30 ಯಾರ್ಡ್ ಸರ್ಕಲ್ನಲ್ಲಿ ನಿಲ್ಲಿಸಬೇಕಾಗುತ್ತದೆ.
ಇನ್ನು 18ನೇ ಓವರ್ ಅನ್ನು 76 ನಿಮಿಷಗಳು ಮತ್ತು 30 ಸೆಕೆಂಡುಗಳಲ್ಲಿ ಪೂರ್ಣಗೊಳಿಸಬೇಕು. ಈ ಸಮಯದೊಳಗೆ 18 ಓವರ್ ಮುಗಿಸಲು ಸಾಧ್ಯವಾಗದಿದ್ದರೆ, ಬೌಂಡರಿ ಲೈನ್ನಿಂದ ಇಬ್ಬರು ಫೀಲ್ಡರ್ಗಳನ್ನು ಕಡಿತಗೊಳಿಸಿ 30 ಯಾರ್ಡ್ ಸರ್ಕಲ್ ಒಳಗೆ ನಿಲ್ಲಿಸಬೇಕಾಗುತ್ತದೆ.
18ನೇ ಓವರ್ನ ಪ್ರಾರಂಭದಲ್ಲಿ ಅಗತ್ಯವಿರುವ ಓವರ್ ರೇಟ್ ಹಿಂದೆ ಇದ್ದರೆ, ಬೌಂಡರಿ ಲೈನ್ನಿಂದ ಓರ್ವ ಆಟಗಾರ 30 ಯಾರ್ಡ್ ಸರ್ಕಲ್ನಲ್ಲಿರಬೇಕಾಗುತ್ತದೆ. ಅಂದರೆ 30 ಯಾರ್ಡ್ ಸರ್ಕಲ್ನಲ್ಲಿ ಒಟ್ಟು 5 ಫೀಲ್ಡರ್ ಇರಬೇಕಾಗುತ್ತದೆ.
19ನೇ ಓವರ್ನ ಪ್ರಾರಂಭದಲ್ಲಿ ಓವರ್ ರೇಟ್ನಲ್ಲಿ ಹಿಂದೆ ಇದ್ದರೆ, ಬೌಂಡರಿ ಲೈನ್ನಿಂದ ಇಬ್ಬರು ಫೀಲ್ಡರ್ಗಳು 30 ಯಾರ್ಡ್ ಸರ್ಕಲ್ನಲ್ಲಿ ಫೀಲ್ಡಿಂಗ್ ಮಾಡಬೇಕಾಗುತ್ತದೆ. ಅಂದರೆ 30 ಯಾರ್ಡ್ ಸರ್ಕಲ್ನಲ್ಲಿ ಒಟ್ಟು 6 ಫೀಲ್ಡರ್ಗಳಿರಬೇಕಾಗುತ್ತದೆ.
20ನೇ ಓವರ್ನ ಆರಂಭದ ವೇಳೆ ಓವರ್ ರೇಟ್ನಲ್ಲಿ ಹಿಂದೆ ಉಳಿದಿದ್ದರೆ, ಓರ್ವ ಫೀಲ್ಡರ್ ಮೈದಾನ ತೊರೆಯಬೇಕಾಗುತ್ತದೆ. ಅಂದರೆ 10 ಮಂದಿಯೊಂದಿಗೆ ಫೀಲ್ಡಿಂಗ್ ಮಾಡಬೇಕಾಗುತ್ತದೆ. ಇಲ್ಲಿ ಯಾರು ಮೈದಾನದಿಂದ ಹೊರಬೇಕು ಎಂಬುದನ್ನು ನಾಯಕ ನಿರ್ಧರಿಸಲಿದ್ದಾನೆ.
ಇನ್ನು ಬ್ಯಾಟಿಂಗ್ ತಂಡವು ಪಂದ್ಯವನ್ನು ನಿಧಾನಗೊಳಿಸಿದರೆ ರನ್ಗಳ ದಂಡ ವಿಧಿಸಲಾಗುತ್ತದೆ. ಅಂದರೆ ಬ್ಯಾಟಿಂಗ್ಗೆ ನಿಲ್ಲಲು ಅಥವಾ ಗ್ಲೌಸ್ ಮತ್ತು ಬ್ಯಾಟ್ಗಳನ್ನು ಬದಲಿಸುವ ಮೂಲಕ ಪಂದ್ಯದ ಸಮಯವನ್ನು ವ್ಯರ್ಥ ಮಾಡಿದರೆ 5 ರನ್ಗಳ ಪೆನಾಲ್ಟಿ ಬೀಳಲಿದೆ.