ನವದೆಹಲಿ, ಜು 27(DaijiworldNews/SM): ಐಸಿಸಿ ಏಕದಿನ ವಿಶ್ವಕಪ್ ಟೂರ್ನಿಗೆ ದಿನಗಣನೆ ಆರಂಭವಾಗಿರುವಂತೆಯೇ ಟೂರ್ನಿಯ ಬಹು ನಿರೀಕ್ಷಿತ ಭಾರತ-ಪಾಕಿಸ್ತಾನ ಪಂದ್ಯಕ್ಕೆ ಕಂಟಕ ಎದುರಾದಂತೆ ತೋರುತ್ತಿದೆ. ಈ ಕಾರಣದಿಂದಾಗಿ ವೇಳಾಪಟ್ಟಿ ಬದಲಾವಣೆ ಮಾಡುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ.
ಅಹಮದಾಬಾದ್ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ಅಕ್ಟೋಬರ್ 15ರಂದು ನಡೆಯಲಿರುವ ಭಾರತ ಮತ್ತು ಪಾಕಿಸ್ತಾನ ಐಸಿಸಿ ಏಕದಿನ ವಿಶ್ವಕಪ್ 2023 ಪಂದ್ಯವನ್ನು ಬಹುತೇಕ ಮುಂದೂಡುವ ಸಾಧ್ಯತೆ ಇದೆ. ಭದ್ರತಾ ಏಜೆನ್ಸಿಗಳು, ವೇಳಾಪಟ್ಟಿಯನ್ನು ಮಾರ್ಪಡಿಸುವಂತೆ ಬಿಸಿಸಿಐಗೆ ಕೇಳಿಕೊಂಡಿವೆ. ಅಂತಾರಾಷ್ಟ್ರೀಯ ಕ್ರಿಕೆಟ್ ಕೌನ್ಸಿಲ್ (ICC) ನವರಾತ್ರಿಯ ಮೊದಲ ದಿನದಂದು ಪಂದ್ಯವನ್ನು ನಿಗದಿಪಡಿಸಿರುವ ಕಾರಣ ಈ ಮನವಿ ಮಾಡಲಾಗಿದೆ ಎಂದು ವರದಿಯಾಗಿದೆ.
ಗುಜರಾತ್ನಾದ್ಯಂತ ಗಾರ್ಬಾ ಸಂಜೆಗಳಲ್ಲಿ ಸಾಕಷ್ಟು ಜನ ಭಾಗವಹಿಸುವುದರಿಂದ ಅಂದು ರಜಾದಿನ ಇರಲಿದೆ. ಈಗಾಗಲೇ ಅಭಿಮಾನಿಗಳು ಈ ಪಂದ್ಯವನ್ನು ವೀಕ್ಷಿಸಲು ತಯಾರಿ ಮಾಡಿಕೊಳ್ಳುತ್ತಿದ್ದಾರೆ. ಅಕ್ಟೋಬರ್ 15ರಂದು ಅಹಮದಾಬಾದ್ನ ಎಲ್ಲಾ ಐಷಾರಾಮಿ ಹೋಟೆಲ್ಗಳು ಬುಕ್ ಆಗಿವೆ. ಲಕ್ಷ ಲಕ್ಷ ಹಣ ಕೊಟ್ಟು ಹೋಟೆಲ್ ರೂಂ ಬುಕ್ ಆಗಿವೆ. ಹೊಟೆಲ್ ರೂಂಗಳಲ್ಲದೇ ಹೊಟೆಲ್ ಸಿಗದ ಕ್ರಿಕೆಟ್ ಪ್ರೇಮಿಗಳು ಖಾಸಗಿ ಆಸ್ಪತ್ರೆಗಳನ್ನೂ ಬುಕ್ ಮಾಡಿದ್ದಾರೆ ಎಂಬ ವರದಿಗಳು ಹರಿದಾಡುತ್ತಿವೆ. ಟಿಕೆಟ್ ಇನ್ನೂ ಮಾರಾಟ ಆಗಿಲ್ಲವಾದರೂ ಈ ಮಟ್ಟದ ಕ್ರೇಜ್ ಈ ಪಂದ್ಯಕ್ಕಿದೆ. ಆದರೆ ಈಗ ದಿನಾಂಕ ಬದಲಾವಣೆ ಮಾಡಿದರೆ, ಅಭಿಮಾನಿಗಳಿಗೆ ನಿರಾಸೆಯಾಗಲಿದೆ.