ಅಹಮದಾಬಾದ್, ಜೂ 29 (DaijiworldNews/SM): ಭಾರತದಲ್ಲಿ ನಡೆಯಲಿರುವ ವಿಶ್ವಕಪ್ ವೇಳಾಪಟ್ಟಿಯನ್ನು ಐಸಿಸಿ ಬಿಡುಗಡೆ ಮಾಡಿದೆ. ಭಾರತ ತನ್ನ ಮೂರನೇ ಪಂದ್ಯವನ್ನು ಪಾಕಿಸ್ತಾನದ ವಿರುದ್ಧ ಅಕ್ಟೋಬರ್ 15ರಂದು ಅಹಮದಾಬಾದ್ ನಲ್ಲಿ ಮೋದಿ ಸ್ಟೇಡಿಯಂನಲ್ಲಿ ಆಡಲಿದೆ. ಈ ಪಂದ್ಯದ ಬಗ್ಗೆ ಈಗಾಗಲೇ ಅಭಿಮಾನಿಗಳಲ್ಲಿ ಕ್ರೇಜ್ ಹೆಚ್ಚಾಗಿದೆ. ಹೋಟೆಲ್ ಗಳ ಮುಂಗಡ ಬುಕ್ಕಿಂಗ್ ಆರಂಭವಾಗಿದ್ದು ಅಕ್ಟೋಬರ್ 15ರಂದು ಹೋಟೆಲ್ಗಳ ದರ ಗಗನಕ್ಕೇರಿದೆ.
ಕ್ರಿಕೆಟ್ ಅಭಿಮಾನಿಗಳ ಪ್ರಕಾರ, ಅಕ್ಟೋಬರ್ 15ರಂದು ಭಾರತ-ಪಾಕಿಸ್ತಾನ ಪಂದ್ಯದ ಕಾರಣ ಹೋಟೆಲ್ಗಳ ಬೆಲೆ ಸುಮಾರು ಹತ್ತು ಪಟ್ಟು ಹೆಚ್ಚಾಗಿದೆ. ಇನ್ನು ಮಾಧ್ಯಮ ವರದಿಗಳ ಪ್ರಕಾರ, ಭಾರತ-ಪಾಕಿಸ್ತಾನ ಪಂದ್ಯಕ್ಕಾಗಿ ಅನೇಕ ಅಭಿಮಾನಿಗಳು ಈಗಾಗಲೇ ಹೋಟೆಲ್ಗಳನ್ನು ಬುಕ್ ಮಾಡುತ್ತಿದ್ದಾರೆ. ಅನೇಕ ಹೋಟೆಲ್ಗಳು ದಿನಕ್ಕೆ ಒಂದು ಲಕ್ಷ ರೂಪಾಯಿಗಳವರೆಗೆ ಬಾಡಿಗೆ ಕೇಳುತ್ತಿವೆ. ಆದರೆ ಅನೇಕ ಹೋಟೆಲ್ಗಳಲ್ಲಿ ಒಂದೇ ಒಂದು ಕೊಠಡಿಯೂ ಖಾಲಿ ಇಲ್ಲ. ಸಾಮಾನ್ಯವಾಗಿ ಐಷಾರಾಮಿ ಹೋಟೆಲ್ಗಳಲ್ಲಿ ಒಂದು ದಿನದ ಕೊಠಡಿ ಬಾಡಿಗೆ 5000 ರೂ.ನಿಂದ 8000 ರೂ.ಗಳಷ್ಟಿದ್ದರೆ, ಅಕ್ಟೋಬರ್ 15ಕ್ಕೆ ಈ ಬಾಡಿಗೆ ಕೆಲವೆಡೆ 40 ಸಾವಿರದಿಂದ ಒಂದು ಲಕ್ಷಕ್ಕೆ ತಲುಪಿದೆ.
ಹೋಟೆಲ್ ಬುಕಿಂಗ್ ಸೈಟ್ಗಳ ಪ್ರಕಾರ, ಜುಲೈ 2ರಂದು ನಗರದಲ್ಲಿ ಡೀಲಕ್ಸ್ ಕೊಠಡಿಯ ದರ 5,699 ರೂಪಾಯಿ. ಆದರೆ, ಅಕ್ಟೋಬರ್ 15ರಂದು ಯಾರಾದರೂ ಒಂದು ದಿನ ತಂಗಲು ಬಯಸಿದರೆ ಅವರು 71,999 ರೂಪಾಯಿ ನೀಡಬೇಕಾಗುತ್ತದೆ. ಹೆಚ್ಚಿನ ಹೋಟೆಲ್ಗಳಲ್ಲಿ ಪಂದ್ಯದ ದಿನ ರೂಮ್ ದರವು 90,679 ರೂಪಾಯಿ ಆಗಿದ್ದರೆ, ಕ್ರೀಡಾಂಗಣದಿಂದ ದೂರದಲ್ಲಿರುವ ಹೋಟೆಲ್ಗಳ ಒಂದು ದಿನದ ಬಾಡಿಗೆ 25,000 ರೂ.ನಿಂದ 50,000 ರೂಪಾಯಿವರೆಗಿದೆ.
ಅಕ್ಟೋಬರ್ 15ರಂದು ನಡೆಯುವ ಪಂದ್ಯದಿಂದಾಗಿ ಅಹಮದಾಬಾದ್ನ ಹೆಚ್ಚಿನ ಪಂಚತಾರಾ ಹೋಟೆಲ್ಗಳು ಸಂಪೂರ್ಣವಾಗಿ ಬುಕ್ ಆಗಿವೆ. ಗುಜರಾತ್ನ ಹೋಟೆಲ್ ಮತ್ತು ರೆಸ್ಟೋರೆಂಟ್ ಅಸೋಸಿಯೇಷನ್ನ ಅಧಿಕಾರಿ ಅಭಿಜಿತ್ ದೇಶಮುಖ್, ಹೆಚ್ಚುತ್ತಿರುವ ಬೇಡಿಕೆಯನ್ನು ಗಮನದಲ್ಲಿಟ್ಟುಕೊಂಡು ಹೋಟೆಲ್ಗಳ ಬಾಡಿಗೆಯನ್ನು ಹೆಚ್ಚಿಸಲಾಗಿದೆ ಎಂದರು.
ಒಂದು ನಿರ್ದಿಷ್ಟ ಸಮಯದಲ್ಲಿ ಕೊಠಡಿಗಳಿಗೆ ಬೇಡಿಕೆ ಹೆಚ್ಚುತ್ತಿದೆ ಎಂದು ಹೋಟೆಲ್ ಮಾಲೀಕರು ಭಾವಿಸಿದರೆ, ಅವರು ಸ್ವಲ್ಪ ಲಾಭವನ್ನು ಗಳಿಸಲು ಬಯಸುತ್ತಾರೆ. ಏಕೆಂದರೆ ದುಬಾರಿ ಬಾಡಿಗೆಯ ಹೊರತಾಗಿಯೂ, ಎಲ್ಲಾ ಕೊಠಡಿಗಳು ಸಂಪೂರ್ಣವಾಗಿ ಭರ್ತಿಯಾಗುತ್ತವೆ ಎಂದು ಅವರಿಗೆ ತಿಳಿದಿದೆ. ಬೇರೆ ದಿನಗಳಲ್ಲಿ ಕೊಠಡಿ ಬಾಡಿಗೆ ಕೂಡ ಕಡಿಮೆಯಾಗುತ್ತದೆ. ಇನ್ನು ಐಷಾರಾಮಿ ಹೋಟೆಲ್ಗಳು ಕ್ರಿಕೆಟ್ ಅಭಿಮಾನಿಗಳ ಮೊದಲ ಆಯ್ಕೆಯಾಗಿದೆ. ಅವರು ಉತ್ತಮ ಪಂದ್ಯಗಳನ್ನು ವೀಕ್ಷಿಸಲು ಎಲ್ಲಿ ಬೇಕಾದರೂ ಬರುತ್ತಾರೆ.