ಲಂಡನ್, ಜೂ 09 (DaijiworldNews/SM) : ಕೆನ್ನಿಂಗ್ಟನ್ ಓವಲ್ ನಲ್ಲಿ ನಡೆಯುತ್ತಿರುವ ಡಬ್ಲ್ಯುಟಿಸಿ ಫೈನಲ್ (WTC Final) ಪಂದ್ಯದಲ್ಲಿ ಭಾರತ ತಂಡವು ಆಸೀಸ್ ಬೌಲರ್ ಗಳ ದಾಳಿಗೆ ಕುಸಿದು, 296 ರನ್ ಗಳಿಗೆ ಆಲೌಟಾಗಿದೆ. ಒಂದು ಹಂತದಲ್ಲಿ ಅಲ್ಪಮೊತ್ತಕ್ಕೆ ಕುಸಿದು, ಫಾಲೋ ಆನ್ ಭೀತಿಯಲ್ಲಿದ್ದ ತಂಡವನ್ನು ಗ್ರೇಟ್ ಕಮ್ ಬ್ಯಾಕ್ ಮಾಡಿರುವ ಅಜಿಂಕ್ಯ ರಹಾನೆ ಮತ್ತು ಆಲ್ ರೌಂಡರ್ ಶಾರ್ದೂಲ್ ಠಾಕೂರ್ ಆಧರಿಸಿ, ಚೇತರಿಕೆ ನೀಡಿದರು.
ಆಸಿಸ್ ಬೌಲರ್ ಗಳ ದಾಳಿಗೆ ಸಿಲುಕಿದ್ದ ಭಾರತವು ಮೊದಲ ದಿನವೇ ಆರಂಭಿಕ ಆಘಾತಕ್ಕೆ ಒಳಗಾಗಿದ್ದು, ಸ್ಟಾರ್ ಬ್ಯಾಟರ್ಗಳು ಕ್ರೀಸ್ನಲ್ಲಿ ನಿಂತು ರನ್ ಗಳಿಸುವಲ್ಲಿ ವಿಫಲರಾದರು. ಶತಕ ಬಾರಿಸುತ್ತಾರೆಂಬ ಭರವಸೆ ಮೂಡಿಸಿದ್ದ ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ, ಚೇತೇಶ್ವರ್ ಪೂಜಾರ ಹಾಗೂ ಶುಭಮನ್ ಗಿಲ್ ಬಹುಬೇಗ ಪೆವಿಲಿಯನ್ ಸೇರಿಬಿಟ್ಟರು. ಇನಿಂಗ್ಸ್ ಮಧ್ಯದಲ್ಲಿ ಹೋರಾಡಿದ ರವೀಂದ್ರ ಜಡೇಜಾ (49) ಅರ್ಧಶತಕದಿಂದ ವಂಚಿತರಾದರು. ಎರಡನೇ ದಿನದಾಟದ ಅಂತ್ಯಕ್ಕೆ ಐದು ವಿಕೆಟ್ 151 ರನ್ ಗಳಿಸಿದ್ದಲ್ಲಿಂದ ಮೂರನೇ ದಿನದಾಟ ಆರಂಭಿಸಿದ ಭಾರತಕ್ಕೆ ಭರತ್ ರೂಪದಲ್ಲಿ ಆಘಾತ ಎದುರಾಗಿತ್ತು. ಕೇವಲ ಐದು ರನ್ ಗಳಿಸಿದ ಭರತ್ ಸ್ಕಾಟ್ ಬೊಲ್ಯಾಂಡ್ ಎಸೆತದಲ್ಲಿ ಬೌಲ್ಡ್ ಆದರು. ಕಮ್ಬ್ಯಾಕ್ ಪಂದ್ಯವನ್ನಾಡುತ್ತಿರುವ ಅಜಿಂಕ್ಯ ರಹಾನೆ ಭಾರತಕ್ಕೆ ಏಕೈಕ ಭರವಸೆಯಾಗಿ ಉಳಿದುಕೊಂಡರು. ಬಳಿಕ ಜೊತೆಯಾದ ರಹಾನೆ ಮತ್ತು ಶಾರ್ದೂಲ್ ಏಳನೇ ವಿಕೆಟ್ ಗೆ 159 ರನ್ ಜೊತೆಯಾಟವಾಡಿದರು. ಅದ್ಭುತ ಇನ್ನಿಂಗ್ಸ್ ಕಟ್ಟಿದ ಅಜಿಂಕ್ಯ ರಹಾನೆ 129 ಎಸೆತದಲ್ಲಿ 89 ರನ್ ಗಳಿಸಿದರು. ಶತಕದ ಅಂಚಿನಲ್ಲಿದ್ದ ರಹಾನೆ ಗ್ರೀನ್ ಹಿಡಿದ ಅದ್ಭುತ ಕ್ಯಾಚ್ ಗೆ ಔಟಾದರು. ಮತ್ತೊಂದೆಡೆ ಉತ್ತಮ ಸಾಥ್ ನೀಡಿದ ಆಲ್ ರೌಂಡರ್ ಶಾರ್ದೂಲ್ ಠಾಕೂರ್ ಅರ್ಧಶತಕ ಪೂರೈಸಿದರು. 109 ಎಸೆತ ಎದುರಿಸಿದ ಠಾಕೂರ್ 51 ರನ್ ಗಳಿಸಿದರು.
ಆಸೀಸ್ ಪರ ನಾಯಕ ಪ್ಯಾಟ್ ಕಮಿನ್ಸ್ ಮೂರು ವಿಕೆಟ್ ಕಿತ್ತು ಮಿಂಚಿದರೆ, ಸ್ಟಾರ್ಕ್, ಬೊಲ್ಯಾಂಡ್ ಮತ್ತು ಗ್ರೀನ್ ತಲಾ ಎರಡು ವಿಕೆಟ್ ಪಡೆದರು. ಒಂದು ವಿಕೆಟ್ ನಥನ್ ಲಿಯಾನ್ ಪಾಲಾಯಿತು. ಸದ್ಯ ಎರಡನೇ ಇನ್ನಿಂಗ್ಸ್ ಆರಂಭಿಸಿರುವ ಆಸೀಸ್ ತಂಡವು 44 ರನ್ನಿಗೆ ಎರಡು ವಿಕೆಟ್ ಕಳೆದುಕೊಂಡು ತನ್ನ ಆಟ ಮುಂದುವರಿಸಿದೆ.