ಅಹ್ಮದಾಬಾದ್, ಮೇ 29 (DaijiworldNews/SM): ಮಳೆಯ ಕಾರಣದಿಂದಾಗಿ ರವಿವಾರದಂದು ಮುಂದೂಡಲ್ಪಟ್ಟಿದ್ದ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಕ್ರಿಕೆಟ್ ಟೂರ್ನಿಯ ಹದಿನಾರನೇ ಆವೃತ್ತಿಯ ಫೈನಲ್ ಪಂದ್ಯ ಸೋಮವಾರ ಆರಂಭಗೊಂಡಿದ್ದು, ಚೆನ್ನೈ ಸೂಪರ್ ಕಿಂಗ್ಸ್ ತಂಡಕ್ಕೆ ಗೆಲ್ಲಲು ಗುಜರಾತ್ ಟೈಟನ್ಸ್ ತಂಡ 215 ರನ್ ಗಳ ಬೃಹತ್ ಗುರಿ ನೀಡಿದೆ.
ಚೆನ್ನೈ ಬ್ಯಾಟಿಂಗ್ ಗೆ ವರುಣ ತಡೆಯಾಗಿದೆ. ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಫೈನಲ್ ಪಂದ್ಯದಲ್ಲಿ ವೃದ್ಧಿಮಾನ್ ಸಹಾ ಅರ್ಧಶತಕ ಹಾಗೂ ಸಾಯಿ ಸುದರ್ಶನ್ ಅಬ್ಬರದ ಬ್ಯಾಟಿಂಗ್ ನೆರವಿನಿಂದ ಗುಜರಾತ್ ತಂಡ 20 ಓವರ್ಗಳಲ್ಲಿ 4 ವಿಕೆಟ್ ನಷ್ಟಕ್ಕೆ 214 ರನ್ ಕಲೆಹಾಕಿದ್ದು ಚೆನ್ನೈ ಸೂಪರ್ ಕಿಂಗ್ಸ್ ತಂಡಕ್ಕೆ ಗೆಲ್ಲಲು 215 ರನ್ಗಳ ಕಠಿಣ ಗುರಿಯನ್ನು ನೀಡಿದೆ.
ಟಾಸ್ ಸೋತರೂ ಮೊದಲು ಬ್ಯಾಟಿಂಗ್ ಮಾಡುವ ಅವಕಾಶ ಪಡೆದ ಗುಜರಾತ್ ಟೈಟನ್ಸ್ ಗೆ ಆರಂಭಿಕರಾದ ಶುಭ್ ಮನ್ ಗಿಲ್ ಮತ್ತು ವೃದ್ದಿಮಾನ್ ಸಾಹ ಉತ್ತಮ ಆರಂಭ ಒದಗಿಸಿದರು. ವೃದ್ಧಿಮಾನ್ ಸಹಾ 39 ಎಸೆತಗಳಲ್ಲಿ 54 ರನ್ ಗಳಿಸಿದರೆ, ಶುಬ್ಮನ್ ಗಿಲ್ 20 ಎಸೆತಗಳಲ್ಲಿ 39 ರನ್ ಗಳಿಸಿದರು.