ಚೆನ್ನೈ, ಮೇ 24 (DaijiworldNews/SM): ಚೆನ್ನೈನ ಎಂಎ ಚಿದಂಬರಂ ಸ್ಟೇಡಿಯಂನಲ್ಲಿ ನಡೆದ ಐಪಿಎಲ್ನ ಮೊದಲ ಕ್ವಾಲಿಫೈಯರ್ ಪಂದ್ಯದಲ್ಲಿ ದೋನಿ ಬಳಗ ಭರ್ಜರಿ ಗೆಲುವು ದಾಖಲಿಸಿಕೊಂಡಿದೆ. ಆ ಮೂಲಕ ಫೈನಲ್ ಗೆ ಲಗ್ಗೆ ಇಟ್ಟಿದೆ. 10ನೇ ಬಾರಿಗೆ ಪೈನಲ್ ಪ್ರವೇಶಿಸಿದೆ ಎನ್ನುವ ದಾಖಲೆಯನ್ನು ತನ್ನ ಹೆಸರಿನಲ್ಲಿ ಬರೆದುಕೊಂಡಿದೆ.
ಗುಜರಾತ್ ಟೈಟಾನ್ಸ್ ವಿರುದ್ಧ ಚೆನ್ನೈ ಸೂಪರ್ ಕಿಂಗ್ಸ್ 15 ರನ್ ಗಳಿಂದ ಭರ್ಜರಿ ಗೆಲುವು ಸಾಧಿಸಿದೆ. ಟಾಸ್ ಸೋತರೂ ಮೊದಲು ಬ್ಯಾಟಿಂಗ್ ಮಾಡುವ ಅವಕಾಶ ಪಡೆದ ಸಿಎಸ್ಕೆ ತಂಡಕ್ಕೆ ಆರಂಭಿಕರಾದ ಡೆವೊನ್ ಕಾನ್ವೆ ಹಾಗೂ ರುತುರಾಜ್ ಗಾಯಕ್ವಾಡ್ ಉತ್ತಮ ಆರಂಭದೊಂದಿಗೆ ನಿಗದಿತ 20 ಓವರ್ಗಳಲ್ಲಿ 7 ವಿಕೆಟ್ ನಷ್ಟಕ್ಕೆ 172 ರನ್ ಗಳಿಸಿತು.
ಗೆಲುವಿಗೆ 173 ರನ್ ಗಳ ಗುರಿ ಬೆನ್ನತ್ತಿದ ಗುಜರಾತ್ ಟೈಟಾನ್ಸ್, 20 ಓವರ್ಗಳಲ್ಲಿ 157 ರನ್ ಗಳಿಗೆ ಸರ್ವಪತನ ಕಂಡಿತು. ಈ ಸೋಲಿನೊಂದಿಗೆ ಗುಜರಾತ್ ಟೈಟಾನ್ಸ್ ತಂಡವು 2ನೇ ಕ್ವಾಲಿಫೈಯರ್ ಪಂದ್ಯ ಆಡಬೇಕಿದೆ.
ಬುಧವಾರ ನಡೆಯಲಿರುವ ಲಕ್ನೋ ಸೂಪರ್ ಜೈಂಟ್ಸ್ ಹಾಗೂ ಮುಂಬೈ ಇಂಡಿಯನ್ಸ್ ನಡುವಣ ಪಂದ್ಯದಲ್ಲಿ ಗೆಲ್ಲುವ ತಂಡದೊಡನೆ ಗುಜರಾತ್ ಟೈಟಾನ್ಸ್ ತಂಡ 2ನೇ ಕ್ವಾಲಿಫೈಯರ್ ಪಂದ್ಯವಾಡಲಿದೆ. ಈ ಪಂದ್ಯದಲ್ಲಿ ಜಯ ಸಾಧಿಸುವ ತಂಡ ಸಿಎಸ್ಕೆ ವಿರುದ್ಧ ಫೈನಲ್ ಆಡಲಿದೆ.
ಸಿಎಸ್ ಕೆ ಪರ ಋತುರಾಜ್ ಗಾಯಕ್ವಾಡ್ ಹಾಗೂ ಎಡಗೈ ಬ್ಯಾಟ್ಸ್ಮನ್ ಡೆವೋನ್ ಕಾನ್ವೆ, ಗುಜರಾತ್ ಬೌಲರ್ಗಳ ಸಂಘಟಿತ ದಾಳಿಯನ್ನು ಸಮರ್ಥವಾಗಿ ಎದುರಿಸಿದರು. ಪರಿಣಾಮ, ಮೊದಲ ವಿಕೆಟ್ಗೆ ಬರೋಬ್ಬರಿ 87 ರನ್ ಸೇರಿಸಿದರು. ಅರ್ಧಶತಕ ಸಿಡಿಸಿ ಗಾಯಕ್ವಾಡ್ ಚೆನ್ನೈ ಗೆಲುವಿಗೆ ನೆರವಾದರು.