ಮುಂಬೈ, ಏ 30 (DaijiworldNews/SM) : ವಿಶ್ವದ ಶ್ರೀಮಂತ ಕ್ರಿಕೆಟ್ ಟಿ20 ಲೀಗ್ ಐಪಿಎಲ್ ನ 1000 ನೇ ಪಂದ್ಯವಾಗಿರುವ ಮುಂಬೈ ಇಂಡಿಯನ್ಸ್-ರಾಜಸ್ಥಾನ್ ರಾಯಲ್ಸ್ ಪಂದ್ಯದ ಮೊದಲು, ಭಾರತದ ಬ್ಯಾಟಿಂಗ್ ದಿಗ್ಗಜ ಸಚಿನ್ ತೆಂಡೂಲ್ಕರ್ ಸಂತೋಷ ವ್ಯಕ್ತಪಡಿಸಿದ್ದು, ಈ ಲೀಗ್ ತನ್ನ 16 ವರ್ಷಗಳ ಇತಿಹಾಸದಲ್ಲಿ ಮೈಲಿಗಲ್ಲನ್ನು ತಲುಪಿದ್ದು ಪಂದ್ಯಾವಳಿಯು ಯುವಕರಿಗೆ ದೊಡ್ಡ ಕನಸು ಕಾಣಲು ಅವಕಾಶ ಮಾಡಿಕೊಟ್ಟಿದೆ ಎಂದಿದ್ದಾರೆ.
ವಾಂಖೆಡೆ ಸ್ಟೇಡಿಯಂನಲ್ಲಿ ಭಾನುವಾರ ಮುಂಬೈ ಇಂಡಿಯನ್ಸ್ ಮತ್ತು ರಾಜಸ್ಥಾನ್ ರಾಯಲ್ಸ್ ನಡುವಿನ ಈ ಆವೃತ್ತಿಯ 42 ನೇ ಪಂದ್ಯ ಹಾಗೂ ಲೀಗ್ನ 1000 ನೇ ಪಂದ್ಯವಾಗಿದೆ. ಈ ಮೂಲಕ ಶ್ರೀಮಂತ ಕ್ರಿಕೆಟ್ ಲೋಕದ ಮತ್ತೊಂದು ಹೆಗ್ಗುರುತಾಗಿ ಇತಿಹಾಸದ ಪುಟವನ್ನು ಅಲಂಕರಿಸಿದೆ. 1000ನೇ ಪಂದ್ಯದ ಹಿನ್ನಲೆಯಲ್ಲಿ ಬಿಸಿಸಿಐ ಕಾರ್ಯದರ್ಶಿ ಜಯ್ ಶಾ ಮತ್ತು ಖಜಾಂಚಿ ಆಶಿಶ್ ಶೆಲಾರ್ ಅವರು BCCI ಪ್ರಶಸ್ತಿಯನ್ನು ಸಚಿನ್ ತೆಂಡೂಲ್ಕರ್ ಮತ್ತು ಕುಮಾರ ಸಂಗಕ್ಕಾರ ಅವರಿಗೆ ಪ್ರದಾನ ಮಾಡಿದರು.
ಪ್ರಶಸ್ತಿ ಸ್ವೀಕರಿಸಿದ ಬಳಿಕ ಪ್ರತಿಕ್ರಿಯಿಸಿದ ಕ್ರಿಕೆಟ್ ದಿಗ್ಗಜ ಸಚಿನ್ ತೆಂಡುಲ್ಕರ್ ಅವರು : ”ಅದ್ಭುತ. ಸಮಯ ತುಂಬಾ ವೇಗವಾಗಿ ಹಾರಿಹೋಯಿತು. ಬಿಸಿಸಿಐಗೆ ದೊಡ್ಡ ಅಭಿನಂದನೆಗಳು. ಇದೊಂದು ದೊಡ್ಡ ಸಾಧನೆ. ಪಂದ್ಯಾವಳಿಯು ಎತ್ತರದಲ್ಲಿ ಹೇಗೆ ಬೆಳೆದಿದೆ ಎಂಬುದನ್ನು ನೀವು ನೋಡಿ. 2008 ರ ಮೊದಲ ಸೀಸನ್ ಎಂದು ನನಗೆ ನೆನಪಿದೆ, ನಾನು ಅದರ ಭಾಗವಾಗಿದ್ದೇನೆ ಮತ್ತು ಈಗ ನಾನು ವಿಭಿನ್ನ ಸಾಮರ್ಥ್ಯದಲ್ಲಿ ಇಲ್ಲಿದ್ದೇನೆ. ಪಂದ್ಯಾವಳಿಯ ಭಾಗವಾಗಲು ಯಾವಾಗಲೂ ಸಂತೋಷವಾಗುತ್ತದೆ. ಇದು ವಿಶ್ವದ ಅತಿದೊಡ್ಡ ಪಂದ್ಯಾವಳಿಯಾಗಿದೆ, ಇದು ಭಾರತ ಮತ್ತು ವಿಶ್ವದ ಕ್ರಿಕೆಟಿಗರಿಗೆ ಹಲವು ಅವಕಾಶಗಳನ್ನು ನೀಡಿದೆ. ಯುವಜನರಿಗೆ ದೊಡ್ಡ ಕನಸು ಕಾಣಲು ಅವಕಾಶ ಮಾಡಿಕೊಟ್ಟಿದೆ ಎಂದು ಹೇಳಿದ್ದಾರೆ.
ಸಚಿನ್ ಆರು ಐಪಿಎಲ್ ಸೀಸನ್ಗಳನ್ನು ಮುಂಬೈ ಇಂಡಿಯನ್ಸ್ಗಾಗಿ ಆಡಿದ್ದು, 78 ಪಂದ್ಯಗಳಲ್ಲಿ 34.84 ಸರಾಸರಿಯಲ್ಲಿ ಒಟ್ಟು 2334 ರನ್ ಗಳಿಸಿದ್ದಾರೆ. 119.82 ಸ್ಟ್ರೈಕ್ ರೇಟ್ನೊಂದಿಗೆ 29 ಸಿಕ್ಸರ್ಗಳು ಮತ್ತು 295 ಬೌಂಡರಿಗಳನ್ನು ಬಾರಿಸಿದ್ದು, 13 ಅರ್ಧಶತಕಗಳು ಮತ್ತು ಒಂದು ಶತಕ ಬಾರಿಸಿದ್ದಾರೆ.