ಚೆನ್ನೈ, ಏ 30 (DaijiworldNews/SM) : ತವರಿನಲ್ಲೇ ಪಂಜಾಬ್ ಕಿಂಗ್ಸ್ ನ ರಣರೋಚಕ ಹೋರಾಟಕ್ಕೆ ಚೆನ್ನೈ ಸೂಪರ್ ಕಿಂಗ್ಸ್ ಶರಣಾಗಿದೆ. ಎಂಎ ಚಿದಂಬರಂ ಸ್ಟೇಡಿಯಂ ನಲ್ಲಿ ಭಾನುವಾರ ನಡೆದ ಐಪಿಎಲ್ ನ ರೋಚಕ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ಪಂಜಾಬ್ ಕಿಂಗ್ಸ್ 4 ವಿಕೆಟ್ ಗಳ ಜಯಭೇರಿ ಬಾರಿಸಿದೆ.
ಚೆನ್ನೈ ಸೂಪರ್ ಕಿಂಗ್ಸ್ ನೀಡಿದ 200 ರನ್ ಗಳ ಬೃಹತ್ ಗುರಿ ಬೆನ್ನಟ್ಟಿದ ಪಂಜಾಬ್ ಕೊನೆಯ ಓವರ್ ವರೆಗೆ ಹೋರಾಟ ಸಂಘಟಿಸಿ 6 ವಿಕೆಟ್ ನಷ್ಟಕ್ಕೆ 201 ರನ್ ಗಳಿಸುವ ಮೂಲಕ ಚೆನ್ನೈ ಸೂಪರ್ ಕಿಂಗ್ಸ್ ಗೆ ಸೋಲಿನ ಆಘಾತ ನೀಡಿತು. ಪಂದ್ಯದ ಕೊನೆಯ ಓವರ್ ನಲ್ಲಿ 9 ರನ್ ಗಳ ಅಗತ್ಯವಿತ್ತು. ಚೆನ್ನೈ ನ ಯುವ ಬೌಲರ್ ಪತಿರನ ಎಸೆದ ೨೦ನೇ ಓವರ್ ನ ಮೊದಲ ಮತ್ತು ಎರಡನೇ ಎಸೆತದಲ್ಲಿ ತಲಾ 1 ರನ್ ಕಸಿದ ಪಂಜಾಬ್ ಬ್ಯಾಟರ್ಸ್ ಮೂರನೇ ಎಸೆತದಲ್ಲಿ ಯಾವುದೇ ರನ್ ಬರಲಿಲ್ಲ. ಕೊನೆಗೆ ಮೂರು ಎಸೆತದಲ್ಲಿ 7 ರನ್ ಗಳ ಅಗತ್ಯವಿದ್ದಾಗ ಸಿಕಂದರ್ ರಜಾ ನಾಲ್ಕನೇ ಎಸೆತದಲ್ಲಿ ಮತ್ತು ಐದನೇ ಎಸೆತದಲ್ಲಿ ತಲಾ 2 ರನ್ ಕಸಿದರು. ಕೊನೆಯ ಎಸೆತದಲ್ಲಿ ಮೂರು ರನ್ ಗಳ ಅಗತ್ಯವಿತ್ತು. ಕೊನೆಯ ಎಸೆತದಲ್ಲಿ ಭರ್ಜರಿಯಾಗಿ ಬ್ಯಾಟ್ ಬೀಸಿದ ರಜಾ 3 ರನ್ ಕಸಿಯುವುದರಲ್ಲಿ ಯಶಸ್ವಿಯಾಗಿ ಪಂಜಾಗೆ ಗೆಲುವು ತಂದಿಟ್ಟರು. ಪಂಜಾಬ್ ಪರ ಆರಂಭಿಕರಾದ ಪ್ರಭಾಸಿಮ್ರಾನ್ ಸಿಂಗ್ (42ರನ್), ನಾಯಕ ಶಿಖರ್ ಧವನ್ (28ರನ್) 50 ರನ್ ಗಳ ಜೊತೆಯಾಟದ ಮೂಲಕ ಉತ್ತಮ ಆರಂಭ ಒದಗಿಸಿದರು, ಲಿಯಾಮ್ ಲಿವಿಂಗ್ಸ್ಟೋನ್ 40, ಸ್ಯಾಮ್ ಕರ್ರಾನ್ 29, ಜಿತೇಶ್ ಶರ್ಮಾ 21 ರನ್ ಗಳ ಕೊಡುಗೆ ನೀಡಿ ಗೆಲುವಿನಲ್ಲಿ ಮಹತ್ತರ ಪಾತ್ರ ವಹಿಸಿದರು. ಕೊನೆಯ ಓವರ್ ನಲ್ಲಿ ಗೆಲುವು ತಂದಿಟ್ಟ ರಜಾ 13(7) ರನ್ ಗಳಿಸಿದರು.
ಇದಕ್ಕೂ ಮುನ್ನ ಟಾಸ್ ಗೆದ್ದು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡ ಚೆನ್ನೈ ಸೂಪರ್ ಕಿಂಗ್ಸ್ 4 ವಿಕೆಟ್ ನಷ್ಟಕ್ಕೆ 200 ರನ್ ಗಳಿಸಿತ್ತು. ಡೆವೊನ್ ಕಾನ್ವೇ 92 ರನ್ (52 ಎಸೆತ) ಭರ್ಜರಿ ಆಟವಾಡಿದರು. ಋತುರಾಜ್ ಗಾಯಕ್ವಾಡ್ 37, ಶಿವಂ ದುಬೆ 28 ರನ್ ಗಳಿಸಿದರು. ಕೊನೆಯ ಓವರ್ ನಲ್ಲಿ ಚೆನ್ನೈ ಕಪ್ತಾನ ಧೋನಿ 2 ಭರ್ಜರಿ ಸಿಕ್ಸ್ ಸಿಡಿಸುವ ಮೂಲಕ ಚೆನ್ನೈ 200 ರನ್ ಗಳಿಸುವಲ್ಲಿ ಕೊಡುಗೆ ನೀಡಿದರು.