ಜೈಪುರ, ಮಾ26(SS): ಐಪಿಎಲ್ ಹನ್ನೆರಡನೇ ಆವೃತ್ತಿಯ ಮೂರನೇ ದಿನದ ಪಂದ್ಯದಲ್ಲಿ ಕಿಂಗ್ಸ್ ಇಲೆವೆನ್ ಪಂಜಾಬ್ ತಂಡ ರಾಜಸ್ಥಾನ್ ರಾಯಲ್ಸ್ ವಿರುದ್ಧ 14 ರನ್ ಅಂತರದ ರೋಚಕ ಗೆಲುವು ಸಾಧಿಸಿದೆ.
ಟಾಸ್ ಸೋತು ಮೊದಲು ಬ್ಯಾಟಿಂಗ್ ನಡೆಸಿದ್ದ ಕಿಂಗ್ಸ್ ಇಲೆವೆನ್ ಪಂಜಾಬ್ ರಾಜಸ್ಥಾನಕ್ಕೆ ಗೆಲ್ಲಲು 185 ರನ್ ಗುರಿ ನೀಡಿತ್ತು. ಆದರೆ ಗುರಿ ತಲುಪಲು ವಿಫಲವಾದ ರಾಜಸ್ಥನ ನಿಗದಿತ ಇಪ್ಪತ್ತು ಓವರ್ ನಲ್ಲಿ 9 ವಿಕೆಟ್ ನಷ್ಟಕ್ಕೆ 170 ರನ್ ಗಳಿಸಲಷ್ಟೇ ಶಕ್ತವಾಗಿದೆ. ಇದೇ ವೇಳೆ ಸೋಲಿನ ದವಡೆಗೆ ಸಿಕ್ಕಿದ್ದ ಪಂಜಾಬ್ ಈ ಆವೃತ್ತಿಯ ಮೊದಲ ಪಂದ್ಯದಲ್ಲೇ ಗೆಲುವಿನ ಶುಭಾರಂಭ ಮಾಡಿದೆ.
ಇದಕ್ಕೆ ಮುನ್ನ ಪಂಜಾಬ್ ನಾಲ್ಕು ವಿಕೆಟ್ ನಷ್ಟಕ್ಕೆ 184ರನ್ ಕಲೆ ಹಾಕಿತ್ತು. ಪಂಜಾಬ್ ಪರವಾಗಿ ಸರ್ಫರಾಜ್ ಖಾನ್ (46) ರನ್ ಗಳಿಸಿ ಉತ್ತಮ ಪ್ರದರ್ಶನ ನೀಡಿದ್ದರೆ ಮಯಾಂಕ್ ಅಗರವಾಲ್ (22), ನಿಕೋಲಸ್ ಪೂರಮ್ (12), ನನದೀಪ್ ಸಿಂಗ್ (5) ರನ್ ಗಳಿಸಿದ್ದರು.
ಪಂಜಾಬ್ ಪಡೆಗೆ ದಾಖಲೆಗಳ ಸರದಾರ ಬ್ಯಾಟಿಂಗ್ ದೈತ್ಯ ಕ್ರಿಸ್ ಗೇಲ್ ಸಹ ನೆರವಾಗಿದ್ದು ಗೇಲ್ 47 ಎಸೆತದಲ್ಲಿ 79 ರನ್ ಗಳಿಸಿದ್ದರು. ಅವರು ತಮ್ಮ ಇನ್ನಿಂಗ್ಸ್ ನಲ್ಲಿ ಒಟ್ಟು 4 ಸಿಕ್ಸರ್ ಹಾಗೂ 8 ಬೌಂಡರಿ ಸಿಡಿಸಿ ಅಭಿಮಾನಿಗಳ ಮೆಚ್ಚುಗೆಗೆ ಪಾತ್ರರಾದರು. ಪಂಜಾಬ್ ನ ಗುರಿ ಬೆನ್ನತ್ತಿದ ರಾಜಸ್ಥಾನದ ಪರ ಜೋಸ್ ಬಟ್ಲರ್ (69), ಸಂಜು ಸಂಸನ್ ೯30), ರೆಹಾನೆ (27), ಸ್ಟೀವನ್ ಸ್ಮಿತ್ (27), ಹೊರತಾಗಿ ಯಾರೂ ಕೂಡ ಎರಡಂಕಿ ತಲುಪಲಿಲ್ಲ.