ಬೆಂಗಳೂರು, ಏ 17 (DaijiworldNews/MS): ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಮಾಜಿ ನಾಯಕ ವಿರಾಟ್ ಕೊಹ್ಲಿ ಅವರಿಗೆ ಐಪಿಎಲ್ ನಿಯಮ ಉಲ್ಲಂಘಿಸಿದ ಕಾರಣಕ್ಕಾಗಿ ಪಂದ್ಯ ಶುಲ್ಕದ ಶೇ 10ರಷ್ಟು ದಂಡ ವಿಧಿಸಲಾಗಿದೆ. ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ಎಂ.ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಕೊಹ್ಲಿ ನಿಯಮ ಉಲ್ಲಂಘಿಸಿ ಅತಿರೇಕದ ವರ್ತನೆ ತೋರಿದ್ದರಿಂದ ದಂಡ ವಿಧಿಸಲಾಗಿದೆ.
ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಈ ಪಂದ್ಯದಲ್ಲಿ ಟಾಸ್ ಸೋತು ಬ್ಯಾಟಿಂಗ್ಗೆ ಇಳಿಸಲ್ಪಟ್ಟ ಚೆನ್ನೈ ಸೂಪರ್ ಕಿಂಗ್ಸ್ ಡೆವೋನ್ ಕಾನ್ವೆ(83) ಮತ್ತು ಶಿವಂ ದುಬೆ(52) ಅವರ ಅರ್ಧಶತಕದ ನೆರವಿನಿಂದ 6 ವಿಕೆಟಿಗೆ 226 ರನ್ ಗಳಿಸಿತು. ಬೃಹತ್ ಮೊತ್ತ ಬೆನ್ನಟ್ಟಿದ ಆರ್ಸಿಬಿ 8 ವಿಕೆಟಿಗೆ 218 ರನ್ ಗಳಿಸಿ ಸೋಲನ್ನಪ್ಪಿತು.ಈ ಪಂದ್ಯದಲ್ಲಿ ಕೊಹ್ಲಿ ಕೇವಲ 6 ರನ್ ಗಳಿಸಿ ಔಟಾಗಿದ್ದರು.
ಸಿಎಸ್ಕೆ ಬ್ಯಾಟರ್ ಶಿವಂ ದುಬೆ ಸಿಕ್ಸರ್ ಬಾರಿಸಿದ ಚೆಂಡನ್ನು ಬೌಂಡರಿ ಗೆರೆಯಲ್ಲಿ ಸಿರಾಜ್ ಕ್ಯಾಚ್ ಹಿಡಿದಿದ್ದರು. ಈ ವೇಳೆ ವಿರಾಟ್ ಸಂಭ್ರಮಿಸಿದ ರೀತಿ ನಿಯಮವನ್ನು ಉಲ್ಲಂಘಿಸಿದೆ. ಕೊಹ್ಲಿ ಲೆವೆಲ್ 1 ನಿಯಮ ಉಲ್ಲಂಘನೆ ಮಾಡಿದ್ದಾರೆ ಎಂದು ಆಯೋಜಕರು ತಿಳಿಸಿದ್ದಾರೆ.