ಬೆಂಗಳೂರು, ಏ 01 (DaijiworldNews/SS) ಭಾರತದ ಅತ್ಯುತ್ತಮ ಕ್ರೀಡಾಪಟುಗಳಾದ ವಿರಾಟ್ ಕೋಹ್ಲಿ ಮತ್ತು ಸುನೀಲ್ ಚೇಟ್ರಿ, ಪೂಮಾ ಸಂಸ್ಥೆ ಏರ್ಪಡಿಸಿದ್ದ ಲೆಟ್ ದೇರ್ ಬಿ ಸ್ಪೋರ್ಟ್ಸ್ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು. ಈ ವೇಳೆ ಮಾತನಾಡಿದ ಇವರು, 'ಭಾರತದ ಮಕ್ಕಳು ಕೂಡ ಕ್ರೀಡೆಯಲ್ಲಿ ಉತ್ತಮ ಸಾಧನೆ ಮಾಡುತ್ತಿದ್ದಾರೆ. ಕ್ರೀಡೆ ಕೂಡ ಶಿಕ್ಷಣದ ಅಗತ್ಯವಾದ ಭಾಗವಾಗಿದೆ' ಎಂಬ ಸಂದೇಶ ಕೊಟ್ಟಿದ್ದಾರೆ.
ಕ್ರೀಡೆಯ ಪ್ರಾಮುಖ್ಯತೆ ಬಗ್ಗೆ ಮಾತನಾಡಿದ ಚೇಟ್ರಿ, 'ಶಾಲೆಗಳಲ್ಲಿ ಕ್ರೀಡೆಗೂ ಸರಿಯಾದ ಪ್ರಾಮುಖ್ಯತೆ ನೀಡಬೇಕು. ಕ್ರೀಡೆ ನಮ್ಮ ಶಿಕ್ಷಣದ ಅವಿಭಾಜ್ಯ ಅಂಗವಾಗಿರಬೇಕು. ಕ್ರೀಡೆ ನಿಮಗೆ ಉತ್ತಮ ಜೀವನ ಪಾಠ ಕಲಿಸುತ್ತದೆ. ಉತ್ತಮ ವ್ಯಕ್ತಿತ್ವ ರೂಪಿಸಿಕೊಳ್ಳಲು ಇದು ಸಹಾಯಕವಾಗಿದೆ. ಹಾಗಾಗಿ ಈಗಿನಿಂದಲೇ ಶಾಲೆಗಳಲ್ಲಿ ಕ್ರೀಡೆಯ ಬಗ್ಗೆ ಪಾಠ ಮಾಡಬೇಕು' ಎಂದು ಸುನೀಲ್ ಚೇಟ್ರಿ ಹೇಳಿದ್ದಾರೆ.
ಅಲ್ಲದೇ 'ನಾನು ಪ್ರತೀ ಸಲವೂ ಸೋಲು ಗೆಲುವು ಎರಡನ್ನೂ ಕಾಣುತ್ತೇನೆ. ನನ್ನ ಬಗ್ಗೆ ನಾನೇ ಕೋಪ ಮಾಡಿಕೊಳ್ಳುತ್ತೇನೆ, ನೊಂದುಕೊಳ್ಳುತ್ತೇನೆ, ನಂತರ ನಾನು ಇನ್ನೊಬ್ಬರ ಜೀವನದ ಹೀರೋ ಆಗುತ್ತೇನೆ. ಹಾಗಾಗಿ ನಿಮ್ಮನ್ನು ಓರ್ವ ಉತ್ತಮ ವ್ಯಕ್ತಿಯನ್ನಾಗಿಸುವುದರಲ್ಲಿ ಕ್ರೀಡೆ ಪ್ರಮುಖ ಪಾತ್ರ ವಹಿಸುತ್ತದೆ' ಎಂದು ಚೇಟ್ರಿ ಹೇಳಿದ್ದಾರೆ.
ಇನ್ನು ಈ ಬಗ್ಗೆ ಮಾತನಾಡಿರುವ ಕಿಂಗ್ ಕೊಹ್ಲಿ, 'ಮಕ್ಕಳು ಇಲ್ಲಿ ಎಚ್ಚರ ವಹಿಸಬೇಕು. ಓದು ಮತ್ತು ಕ್ರೀಡೆ ಎರಡೂ ಕಡೆ ಗಮನ ಕೊಡಬೇಕು. ನೀವು ಒಂದು ನಿರ್ದಿಷ್ಟ ಸಮಯದವರೆಗೆ ಕ್ರೀಡೆಯಲ್ಲಿ ಸಾಧನೆ ಮಾಡಲು ಪ್ರಯತ್ನಿಸಬಹುದು. ಆದರೆ ಆ ಸಾಧನೆ, ಒತ್ತಡವಾಗಿ ಬಿಟ್ಟರೆ, ತೊಂದರೆಯಾಗುತ್ತದೆ. ಹಾಗಾಗಿ ನೀವು ಕ್ರೀಡೆಯಲ್ಲಿ ಸಾಧನೆ ಮಾಡಲಾಗುವುದಿಲ್ಲವೆಂದು ಗೊತ್ತಾದಲ್ಲಿ, ಓದಿನ ಕಡೆ ಗಮನ ಕೊಡಬೇಕು' ಎಂದು ಕೊಹ್ಲಿ ಹೇಳಿದ್ದಾರೆ.