ಬೆಂಗಳೂರು, ಮಾ 30 (DaijiworldNews/DB): ಬಹು ನಿರೀಕ್ಷಿತ ಇಂಡಿಯನ್ ಪ್ರೀಮಿಯರ್ ಲೀಗ್ ನಾಳೆಯಿಂದ ಆರಂಭಗೊಳ್ಳಲಿದೆ. ಆದರೆ ಈ ಬಾರಿಯ ಐಪಿಎಲ್ ಆರಂಭಕ್ಕೆ ಮುನ್ನವೇ ಆರ್ಸಿಬಿ ತಂಡಕ್ಕೆ ಸ್ಟಾರ್ ಆಟಗಾರರಿಬ್ಬರ ಅಲಭ್ಯತೆಯ ಆತಂಕ ಎದುರಾಗಿದೆ.
ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದಲ್ಲಿರುವ ಆಸ್ಟೇಲಿಯಾದ ಇಬ್ಬರು ಸ್ಟಾರ್ ಆಟಗಾರರಾದ ವೇಗದ ಬೌಲರ್ ಜೋಶ್ ಹೇಜಲ್ವುಡ್ ಮತ್ತು ಆಲ್ರೌಂಡರ್ ಗ್ಲೆನ್ ಮ್ಯಾಕ್ಸ್ವೆಲ್ ಗಾಯದ ಸಮಸ್ಯೆಯಿಂದ ಬಳಲುತ್ತಿದ್ದು, ಐಪಿಎಲ್ನಲ್ಲಿ ಇವರಿಬ್ಬರು ಆಡುವುದು ಅನುಮಾನ ಎನ್ನಲಾಗಿದೆ. ಇದರಿಂದ ಆರ್ಸಿಬಿ ತಂಡಕ್ಕೆ ಗೊಂದಲ ಉಂಟಾಗಿದೆ.
ಇನ್ನು ವೇಗದ ಬೌಲರ್ ಜೋಶ್ ಹೇಜಲ್ವುಡ್ ಅವರು ಪಂದ್ಯದ ದ್ವಿತೀಯಾರ್ಧದಲ್ಲಿ ಆರ್ಸಿಬಿ ತಂಡವನ್ನು ಸೇರಿಕೊಳ್ಳುವ ಸಾಧ್ಯತೆಯಿದ್ದು, ಮೊದಲಾರ್ಧದಲ್ಲಿ ಅವರು ತಂಡಕ್ಕೆ ಆಗಮಿಸುವುದು ಅಸಾಧ್ಯ ಎಂದೇ ಹೇಳಲಾಗುತ್ತಿದೆ. ಇವರು ಭಾರತ ವಿರುದ್ದದ ಏಕದಿನ ಸರಣಿಯಲ್ಲೂ ಆಸ್ಟ್ರೇಲಿಯಾ ತಂಡದಲ್ಲಿ ಆಡಿರಲಿಲ್ಲ.
ಇನ್ನು ಆಲ್ರೌಂಡರ್ ಗ್ಲೆನ್ ಮ್ಯಾಕ್ಸ್ವೆಲ್ ಅವರು ಕೂಡಾ ಗಾಯದ ಸಮಸ್ಯೆಯಿಂದ ಬಳಲುತ್ತಿದ್ದು, ಗುಣಮುಖರಾದ ಬಳಿಕವಷ್ಟೇ ಅವರು ಮೈದಾನಕ್ಕಿಳಿಯಲಿದ್ದಾರೆ. ಮುಂಬೈ ಇಂಡಿಯನ್ಸ್ ವಿರುದ್ಧ ಏಪ್ರಿಲ್ 2ರಂದು ನಡೆಯುವ ಪಂದ್ಯದಲ್ಲಿ ಗ್ಲೆನ್ ಆಡುವುದಿಲ್ಲ ಎಂದು ತಿಳಿದು ಬಂದಿದೆ.