ಚೆನ್ನೈ, ಮಾ 21(SM): 2018ನೇ ಬಾರಿಯ ಐಪಿಎಲ್ ಚಾಂಪಿಯನ್ ಚೆನ್ನೈ ಸೂಪರ್ ಕಿಂಗ್ಸ್ ಮೊದಲ ಪಂದ್ಯದ ಆದಾಯವನ್ನು ಪುಲ್ವಾಮ ಉಗ್ರ ದಾಳಿಯಲ್ಲಿ ಹುತಾತ್ಮರಾದ ಯೋಧರ ಕುಟುಂಬಗಳಿಗೆ ಹಸ್ತಾಂತರಿಸಲು ನಿರ್ಧರಿಸಿದೆ. 12ನೇ ಆವೃತಿಯ ಐಪಿಎಲ್ ಸರಣಿಯ ಮೊದಲ ಪಂದ್ಯ ಚೆನ್ನೈ ಅಂಗಳದಲ್ಲಿ ಸಿ ಎಸ್ ಕೆ ಹಾಗೂ ಆರ್ ಸಿಬಿ ತಂಡಗಳ ಮಧ್ಯೆ ನಡೆಯಲಿದೆ. ಈ ವೇಳೆ ಚೆನ್ನೈ ನಲ್ಲಿ ಪಂದ್ಯ ವೀಕ್ಷಣೆಗೆ ಆಗಮಿಸುವ ಪ್ರೇಕ್ಷಕರು ನೀಡುವ ಟಿಕೆಟ್ ಹಣವನ್ನು ಪುಲ್ವಾಮಾ ದಾಳಿಯಲ್ಲಿ ಹುತಾತ್ಮರಾದ ಯೋಧರಿಗೆ ನೀಡಲು ಚೆನ್ನೈನ ಆಡಳಿತ ನಿರ್ಧರಿಸಿದೆ.
ಇನ್ನು ಉದ್ಘಾಟನಾ ಪಂದ್ಯವನ್ನು ಅದ್ದೂರಿಯಿಂದ ನಡೆಸದೆ ಸಾಧಾರಣವಾಗಿ ನಡೆಸಲು ಬಿಸಿಸಿಐ ನಿರ್ಧರಿಸಿದೆ. ಹಾಗೂ ಉದ್ಘಾಟನಾ ಪಂದ್ಯದ ಹಣವನ್ನು ಯೋಧರ ಕುಟುಂಬಗಳಿಗೆ ನೀಡುವುದಾಗಿ ಈಗಾಗಲೇ ಘೋಷಣೆ ಮಾಡಿದೆ.
ಇನ್ನು ಪ್ರಮುಖ ವಿಚಾರವೆಂದರೆ, ಸಿಎಸ್ಕೆ -ಆರ್ಸಿಬಿ ಪಂದ್ಯದ ಟಿಕೆಟ್ ಮಾರಾಟಕ್ಕೆ ಬಿಡುಗಡೆಯಾದ ದಿನದ ಒಂದು ಗಂಟೆಯಲ್ಲೇ ಎಲ್ಲಾ ಟಿಕೆಟ್ ಗಳು ಸೇಲ್ ಆಗಿವೆ. ಮೊದಲ ಪಂದ್ಯದಲ್ಲಿ ಕೊಹ್ಲಿ, ಧೋನಿ, ಎಬಿಡಿ, ಬ್ರಾವೋ ಸೇರಿದಂತೆ ಅಂತಾರಾಷ್ಟ್ರೀಯ ಮಟ್ಟದ ಕ್ರಿಕೆಟಿಗರು ಪಾಲ್ಗೊಳ್ಳುವುದರಿಂದ ಈ ಪಂದ್ಯ ಹೆಚ್ಚಿನ ಮಹತ್ವ ಪಡೆದುಕೊಂಡಿದೆ.
ಈ ಎರಡು ತಂಡಗಳು ಒಟ್ಟಾರೆಯಾಗಿ ಆಡಿರುವ 23 ಪಂದ್ಯಗಳಲ್ಲಿ 15 ಬಾರಿ ಸಿಎಸ್ಕೆ ಗೆಲುವು ಸಾಧಿಸಿದ್ದರೆ ಆರ್ಸಿಬಿ ಕೇವಲ 7 ಬಾರಿ ಮಾತ್ರವೇ ಗೆಲುವು ಸಾಧಿಸಿದೆ.