ನವದೆಹಲಿ, ಮಾ 28 (DaijiworldNews/DB): ಟ್ಯಾಟೂ ಹಾಕಿಸಿಕೊಳ್ಳುವುದೆಂದರೆ ಬಹುತೇಕ ಯುವ ಜನರಿಗೆ ಕ್ರೇಜ್. ಅದೇ ರೀತಿ ಟ್ಯಾಟೂ ಹಾಕಿಸಿಕೊಳ್ಳಲು ಹೋಗಿದ್ದ ಕ್ರಿಕೆಟಿಗ ಶಿಖರ್ ಧವನ್ ಒಮ್ಮೆಯಂತೂ ಟ್ಯಾಟೂ ಸೂಜಿಯಿಂದ ಎಚ್ಐವಿ ಬರಬಹುದೆಂದು ತೀರಾ ಹೆದರಿದ್ದರಂತೆ. ಅದಕ್ಕಾಗಿ ಅವರು ಎಚ್ಐವಿ ಪರೀಕ್ಷೆ ಕೂಡಾ ಮಾಡಿಸಿದ್ದರಂತೆ. ಆದರೆ ಅದು ನೆಗೆಟಿವ್ ಬಂದಿದ್ದರಿಂದ ನಿಟ್ಟುಸಿರು ಬಿಟ್ಟಿದ್ದರು.
ದೇಹದಲ್ಲಿ ಹಲವು ಟ್ಯಾಟೂ ಹಾಕಿಸಿಕೊಂಡಿರುವ ಧವನ್, ತಮ್ಮ ಖಾಸಗಿ ಜೀವನದ ಬಗ್ಗೆ ಸಂದರ್ಶನವೊಂದರಲ್ಲಿ ಕುತೂಹಲಕಾರಿ ವಿಚಾರಗಳನ್ನು ಹಂಚಿಕೊಂಡಿದ್ದಾರೆ. ಹಲವು ಟ್ಯಾಟೂಗಳನ್ನು ಹಾಕಿಕೊಂಡಿದ್ದರೂ, ಒಮ್ಮೆ ಮಾತ್ರ ಆ ಟ್ಯಾಟೂಗೆ ಬಳಸಿದ ಸೂಜಿಯ ಬಗ್ಗೆ ಹೆದರಿದ್ದೆ. 14-15 ವರ್ಷ ವಯಸ್ಸಿನವನಾಗಿದ್ದಾಗ ಮನಾಲಿಗೆ ಹೋಗಿದ್ದಾಗ ಅಲ್ಲಿ ಕುಟುಂಬದವರಿಗೆ ತಿಳಿಸದೆ ಬೆನ್ನಿನ ಮೇಲೆ ಹಾಕಿದ ಟ್ಯಾಟೂ ಹಾಕಿಸಿದ್ದೆ. ಆ ಸೂಜಿಯಿಂದ ಎಚ್ಐವಿ ಬಂದಿರಬಹುದೇ ಎಂಬ ಆತಂಕದಿಂದ ಎಚ್ಐವಿ ಪರೀಕ್ಷೆ ಮಾಡಿಸಿಕೊಂಡಿದ್ದೆ ಎಂದಿದ್ದಾರೆ.
ಇನ್ನು ತನ್ನ ಟ್ಯಾಟೂ ಹಾಕಿಸಿಕೊಳ್ಳುವ ಅಭ್ಯಾಸಕ್ಕೆ ಕುಟುಂಬದಲ್ಲಿ ಎಲ್ಲರ ವಿರೋಧವಿತ್ತು. ತಂದೆಯಿಂದಲೂ ನಾನು ಹೊಡೆಸಿಕೊಂಡಿದ್ದೆ. ಮನಾಲಿಯಲ್ಲಿ ಹಾಕಿದ್ದ ಟ್ಯಾಟೂವನ್ನು ಸುಮಾರು ನಾಲ್ಕು ತಿಂಗಳು ಮರೆ ಮಾಚಿದ್ದೆ. ಆ ಬಳಿಕ ತಂದೆಗೆ ಗೊತ್ತಾಗಿ ಹೊಡೆದಿದ್ದರು ಎಂದವರು ಮೆಲುಕು ಹಾಕಿಕೊಂಡಿದ್ದಾರೆ.