ನವದೆಹಲಿ, ಮಾ 24 (DaijiworldNews/DB): ಈ ವರ್ಷದ ಸೆಪ್ಟಂಬರ್ನಲ್ಲಿ ನಡೆಯಲಿರುವ ಏಷ್ಯಾ ಕಪ್ ಕೂಟಕ್ಕೆ ಪಾಕಿಸ್ತಾನವು ಅತಿಥೇಯವಾಗುವುದು ಬಹುತೇಕ ಅಂತಿಮಗೊಂಡಿದೆ. ಆದರೆ ಟೀಂ ಇಂಡಿಯಾದ ಪಂದ್ಯಗಳು ಪಾಕ್ನಿಂದ ದೂರವಿರುವ ಸಾಗರೋತ್ತರ ತಟಸ್ಥ ಸ್ಥಳವೊಂದರಲ್ಲಿ ನಡೆಯಲಿದೆ.
ಏಷ್ಯಾ ಕಪ್ ಆತಿಥ್ಯ ಹಕ್ಕುಗಳ ಕುರಿತು ಪಿಸಿಬಿ ಮತ್ತು ಬಿಸಿಸಿಐ ನಡುವೆ ಸಂಘರ್ಷ ಏರ್ಪಟ್ಟಿತ್ತು. ಈ ಕೂಟದ ಆತಿಥ್ಯಕ್ಕಾಗಿ ಪಾಕಿಸ್ತಾನ ಪಟ್ಟು ಹಿಡಿದಿದ್ದು, ಇದೀಗ ಆತಿಥ್ಯವನ್ನು ಅದೇ ರಾಷ್ಟ್ರ ವಹಿಸಲಿದೆ ಎಂದು ತಿಳಿದು ಬಂದಿದೆ. ಆದರೆ ಟೀಂ ಇಂಡಿಯಾ ಈ ಪಂದ್ಯಕ್ಕೆ ಪಾಕಿಸ್ತಾನಕ್ಕೆ ತೆರಳಲು ನಿರಾಕರಿಸಿರುವುದರಿಂದ ಪಾಕ್ನಿಂದ ದೂರದಲ್ಲಿರುವ ಸಾಗರೋತ್ತರ ತಟಸ್ಥ ಸ್ಥಳವೊಂದರಲ್ಲಿ ಟೀಂ ಇಂಡಿಯಾ ಆಡಲಿದೆ ಎನ್ನಲಾಗಿದೆ. ಆದರೆ ಆ ತಟಸ್ಥ ಸ್ಥಳ ಯಾವುದು ಎಂಬುದು ಅಂತಿಮಗೊಂಡಿಲ್ಲ.
ಆರು ರಾಷ್ಟ್ರಗಳು ಏಷ್ಯಾ ಕಪ್ನಲ್ಲಿ ಭಾಗವಹಿಸಲಿದ್ದು, ಕ್ವಾಲಿಫೈಯರ್ ತಂಡದೊಂದಿಗೆ ಭಾರತ ಮತ್ತು ಪಾಕಿಸ್ತಾನ ಎರಡೂ ರಾಷ್ಟ್ರಗಳು ಒಂದೇ ಗುಂಪಿನಲ್ಲಿವೆ.