ನವದೆಹಲಿ, ಮಾ 22 (DaijiworldNews/DB): ಪ್ಯಾರಿಸ್ ಒಲಿಂಪಿಕ್ಸ್ಗೆ ತಯಾರಾಗಲು ಟೋಕಿಯೊ ಒಲಿಂಪಿಕ್ಸ್ ಚಿನ್ನದ ಪದಕ ವಿಜೇತ ನೀರಜ್ ಚೋಪ್ರಾ ಅವರು ಟರ್ಕಿಯಲ್ಲಿ ತರಬೇತಿ ಪಡೆಯಲಿದ್ದಾರೆ. ಎರಡು ತಿಂಗಳ ತರಬೇತಿಗಾಗಿ ಎಪ್ರಿಲ್ ಮೊದಲ ದಿನದಂದೇ ಅವರು ಟರ್ಕಿಗೆ ಪ್ರಯಾಣಿಸಲಿದ್ದಾರೆ.
ನೀರಜ್ ಚೋಪ್ರಾ ಅವರು ಟರ್ಕಿಯಲ್ಲಿ ತರಬೇತಿ ಪಡೆಯಲಿರುವುದನ್ನು ಕೇಂದ್ರ ಕ್ರೀಡಾ ಸಚಿವಾಲಯವೇ ಖಚಿತಪಡಿಸಿದೆ. ಟರ್ಕಿಯ ಗ್ಲೋರಿಯಾ ನ್ಪೋರ್ಟ್ಸ್ ಕೇಂದ್ರದಲ್ಲಿ 61 ದಿನಗಳ ಕಾಲ ಅವರು ತರಬೇತಿ ಪಡೆಯಲಿದ್ದು, ಇದೇ ಎಪ್ರಿಲ್ 1ಕ್ಕೆ ಅವರು ಟರ್ಕಿಗೆ ತೆರಳಲಿದ್ದಾರೆ. ಮೇ 31ರವರೆಗೆ ಚೋಪ್ರಾ ಟರ್ಕಿಯಲ್ಲಿ ತರಬೇತಿ ಪಡೆಯಲಿದ್ದಾರೆ ಎಂದು ಕ್ರೀಡಾ ಸಚಿವಾಲಯ ತಿಳಿಸಿದೆ.
ಕಳೆದ ವರ್ಷವೂ ಟಾರ್ಗೆಟ್ ಒಲಿಂಪಿಕ್ ಪೋಡಿಯಂ ಯೋಜನೆಯಡಿ ಚೋಪ್ರಾ ಟರ್ಕಿಯಲ್ಲಿ ತರಬೇತಿ ಪಡೆದು ಉತ್ತಮವಾಗಿ ಆಡಿದ್ದರು. ಇದೇ ಯೋಜನೆಯಡಿ ಈ ಬಾರಿಯೂ ಅವರು ಟರ್ಕಿಯಲ್ಲಿ ತರಬೇತಿ ಪಡೆಯಲಿದ್ದಾರೆ. ಯೋಜನೆಯಡಿ ಸಂಪೂರ್ಣ ಖರ್ಚು ವೆಚ್ಚವನ್ನು ಕ್ರೀಡಾ ಸಚಿವಾಲಯ ಭರಿಸುತ್ತದೆ.