ನವದೆಹಲಿ, ಮಾ 21 (DaijiworldNews/DB): ಎಂಸಿಎಫ್ ರಾಯ್ ಬರೇಲಿ ಹಾಕಿ ಕ್ರೀಡಾಂಗಣಕ್ಕೆ ಭಾರತ ಹಾಕಿ ತಂಡದ ಆಟಗಾರ್ತಿ ರಾಣಿ ರಾಂಪಾಲ್ ಅವರ ಹೆಸರನ್ನು ಮರು ನಾಮಕರಣ ಮಾಡಲಾಗಿದೆ. 'ರಾಣಿ ಗರ್ಲ್ಸ್ ಹಾಕಿ ಟರ್ಫ್' ಎಂಬುದಾಗಿ ಕ್ರೀಡಾಂಗಣದ ಹೆಸರು ಬದಲಾಗಿದೆ.
ಹಾಕಿ ಕ್ರೀಡಾಂಗಣಕ್ಕೆ ತಮ್ಮ ಹೆಸರು ಹೊಂದಿರುವ ದೇಶದ ಮೊದಲ ಮಹಿಳೆ ಎಂಬ ಕೀರ್ತಿಗೂ ರಾಣಿ ಭಾಜನರಾಗಿದ್ದಾರೆ. ಈ ಸಂಬಂಧ ಸಾಮಾಜಿಕ ಮಾಧ್ಯಮಗಳಲ್ಲಿ ಫೋಟೋ ಶೇರ್ ಮಾಡಿಕೊಂಡಿರುವ 28 ವರ್ಷದ ರಾಣಿ, ಹಾಕಿ ಕ್ರೀಡೆಯಲ್ಲಿ ನನ್ನ ಕೊಡುಗೆಯನ್ನು ಸ್ಮರಿಸಲು ಈ ಕ್ರೀಡಾಂಗಣಕ್ಕೆ ನನ್ನ ಹೆಸರಿಟ್ಟಿರುವುದಕ್ಕೆ ನನಗೆ ಸಂತೋಷವಾಗಿದೆ. ಈ ಪ್ರೀತಿ, ಗೌರವಕ್ಕೆ ಕೃತಜ್ಞತೆ ಅರ್ಪಿಸಲು ಪದಗಳಿಲ್ಲ ಎಂದು ಬರೆದುಕೊಂಡಿದ್ದಾರೆ.
ನನ್ನ ಹೆಸರಿನ ಕ್ರೀಡಾಂಗಣ ಹೊಂದಿರುವ ದೇಶದ ಮೊದಲ ಮಹಿಳಾ ಹಾಕಿ ಆಟಗಾರ್ತಿ ಎಂಬುದು ನನಗೊಂದು ಹೆಮ್ಮೆಯಾಗಿದೆ. ಭಾರತೀಯ ಹಾಕಿ ತಂಡಕ್ಕೆ ಈ ಗೌರವವನ್ನು ಅರ್ಪಿಸುತ್ತೇನೆ. ಮಹಿಳಾ ಹಾಕಿ ಆಟಗಾರ್ತಿಯರಿಗೆ ಇದು ಸ್ಪೂರ್ತಿ ಎಂದು ಭಾವಿಸುತ್ತೇನೆ ಎಂದಿದ್ದಾರೆ.
ಬೆಲ್ಜಿಯಂ ವಿರುದ್ಧ ಎಫ್ಐಎಚ್ ಮಹಿಳಾ ಹಾಕಿ ಪ್ರೊ ಲೀಗ್ 2021-22 ರಾಣಿ ಅವರ ಕೊನೆಯ ಹಾಕಿ ಆಟವಾಗಿತ್ತು. ಟೋಕಿಯೋ ಒಲಿಂಪಿಕ್ಸ್ ವೇಳೆ ಗಾಯಗೊಂಡಿದ್ದರಿಂದ 2022ರ ವಿಶ್ವಕಪ್ ಮತ್ತು ಕಾಮನ್ವೆಲ್ತ್ ಗೇಮ್ಸ್ನಿಂದ ಹೊರಗುಳಿದಿದ್ದರು.