ನವದೆಹಲಿ, ಮಾ. 1 (DaijiworldNews/SM): ಆಸ್ಟ್ರೇಲಿಯಾದ ಎಡಗೈ ಸ್ಪಿನ್ನರ್ ಮ್ಯಾಥ್ಯೂ ಕುಹ್ನೆಮನ್ ಮೂರನೇ ಟೆಸ್ಟ್ ಪಂದ್ಯದಲ್ಲಿ ಐದು ವಿಕೆಟ್ ಹಾಗೂ ಆರಂಭಿಕ ಬ್ಯಾಟರ್ ಉಸ್ಮಾನ್ ಖವಾಜಾ ಅರ್ಧಶತಕದ ನೆರವಿನಿಂದ ಆಸ್ಟ್ರೇಲಿಯಾವು ಇಂದೋರ್ನಲ್ಲಿ ಬುಧವಾರ ನಡೆದ ಮೂರನೇ ಟೆಸ್ಟ್ ಕ್ರಿಕೆಟ್ ಪಂದ್ಯದ ಮೊದಲ ದಿನದಂದು ಮೊದಲ ಇನ್ನಿಂಗ್ಸ್ನಲ್ಲಿ ನಾಲ್ಕು ವಿಕೆಟ್ ನಷ್ಟಕ್ಕೆ 156 ರನ್ ಪೇರಿಸಿದ್ದು. 47 ರನ್ಗಳ ಮುನ್ನಡೆ ಸಾಧಿಸಿದೆ.
ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ್ದ ಭಾರತವನ್ನು 109 ರನ್ಗಳಿಗೆ ಆಲೌಟ್ ಆಗಿತ್ತು. ವಿರಾಟ್ ಕೊಹ್ಲಿ 52 ಎಸೆತಗಳಲ್ಲಿ 22 ರನ್ ಗಳಿಸುವ ಮೂಲಕ ಭಾರತ ಪರ ಗರಿಷ್ಠ ರನ್ ಸ್ಕೋರರ್ ಆಗಿದ್ದರೆ, ಕಳಪೆ ಫಾರ್ಮ್ನಿಂದ ಕಂಗೆಟ್ಟಿದ್ದ ಲೋಕೇಶ್ ರಾಹುಲ್ ಬದಲಿಗೆ ಆಡಿದ ಶುಭಮನ್ ಗಿಲ್ 21 ರನ್ ಗಳಿಸಿದ್ದಾರೆ. ಇನ್ನು ಮೂವರು ಬ್ಯಾಟ್ಸ್ಮನ್ಗಳಾದ ರೋಹಿತ್ ಶರ್ಮಾ (12), ರವೀಂದ್ರ ಜಡೇಜಾ (04) ಮತ್ತು ಶ್ರೇಯಸ್ ಅಯ್ಯರ್ (0) ಆಕ್ರಮಣಕಾರಿ ಆಟವಾಡಲು ಪ್ರಯತ್ನಿಸಿ ಔಟಾದರು.
ಇದಕ್ಕೆ ಉತ್ತರವಾಗಿ ಆಸ್ಟ್ರೇಲಿಯಾ, ಖವಾಜಾ (60) ಮತ್ತು ಮಾರ್ನಸ್ ಲಬುಶೆನ್ (31) ಎರಡನೇ ವಿಕೆಟ್ಗೆ 96 ರನ್ಗಳ ಜೊತೆಯಾಟದೊಂದಿಗೆ ಪಂದ್ಯದಲ್ಲಿ ತನ್ನ ಸ್ಥಾನವನ್ನು ಬಲಪಡಿಸಿತು. ಇದು ಆಸ್ಟ್ರೇಲಿಯದ ಸರಣಿಯ ಅತಿ ದೊಡ್ಡ ಜೊತೆಯಾಟವಾಗಿದೆ. ದಿನದಾಟದ ಅಂತ್ಯಕ್ಕೆ ಪೀಟರ್ ಹ್ಯಾಂಡ್ಸ್ಕಾಂಬ್ ಅಜೇಯ 7 ರನ್ ಗಳಿಸಿದ್ದರೆ ಕ್ಯಾಮರೂನ್ ಗ್ರೀನ್ 6 ರನ್ ಗಳಿಸಿದ್ದು ನಾಳೆ ಎರಡನೇ ದಿನದಾಟ ಆರಂಭಿಸಲಿದ್ದಾರೆ.
ಭಾರತ ಪರ ಬೌಲಿಂಗ್ ನಲ್ಲಿ ಅದ್ಭುತ ಪ್ರದರ್ಶನ ನೀಡಿರುವ ರವೀಂದ್ರ ಜಡೇಜಾ 4 ವಿಕೆಟ್ ಪಡೆದಿದ್ದಾರೆ.
ಬಾರ್ಡರ್-ಗವಾಸ್ಕರ್ ಟ್ರೋಲಿಯ ನಾಲ್ಕು ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ಭಾರತ 2-0 ಅಂತರದಿಂದ ಮುನ್ನಡೆ ಸಾಧಿಸಿದೆ.