ನವದೆಹಲಿ, ಫೆ 26 (DaijiworldNews/DB): ಭಾರತ ತಂಡಕ್ಕೆ ಉಪ ನಾಯಕನ ಅಗತ್ಯವಿಲ್ಲ ಎಂದು ಟೀಂ ಇಂಡಿಯಾ ಮಾಜಿ ಕೋಚ್ ರವಿಶಾಸ್ತ್ರಿ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಈ ಸಂಬಂಧ ಮಾತನಾಡಿರುವ ರವಿಶಾಸ್ತ್ರಿ, ದೇಶೀಯ ಸರಣಿಗೆ ಉಪ ನಾಯಕನ ನೇಮಕ ಅಷ್ಟೊಂದು ಸಮಂಜಸವಲ್ಲ. ನಾಯಕನೇ ಮೈದಾನದಲ್ಲಿ ಎಲ್ಲಾ ಆಟಗಾರರನ್ನು ಸಮಾನಾಗಿ ನೋಡಿಕೊಳ್ಳಬೇಕು. ಉಪ ನಾಯಕ ಜವಾಬ್ದಾರಿಯನ್ನು ವಹಿಸಿ ಯಾರಿಗೂ ಅನಗತ್ಯ ತೊಂದರೆ ನೀಡಬೇಡಿ ಎಂದಿದ್ದಾರೆ.
ಈಗಾಗಲೇ ಆಸ್ಟ್ರೇಲಿಯಾ ವಿರುದ್ದದ 4 ಟೆಸ್ಟ್ಗಳ ಸರಣಿಯಲ್ಲಿ ಭಾರತ 2ರಲ್ಲಿ ಮುನ್ನಡೆ ಸಾಧಿಸಿದ್ದು, ಮಾರ್ಚ್ 1ರಿಂದ ಪ್ರಾರಂಭವಾಗುವ ಮೂರನೇ ಟೆಸ್ಟ್ ಪಂದ್ಯದ ಗೆಲುವಿಗೆ ಕಾಯುತ್ತಿದೆ. ಆ ಮೂಲಕ ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ನಲ್ಲಿ ಫೈನಲ್ಗೆ ಲಗ್ಗೆ ಇಡುವ ಪ್ರಯತ್ನದಲ್ಲಿ ಭಾರತ ತಂಡ ಇದೆ. ಈ ನಡುವೆ ಉಪ ನಾಯಕ ಸ್ಥಾನದಿಂದ ಕನ್ನಡಿಗ ಕೆ.ಎಲ್. ರಾಹುಲ್ರನ್ನು ಬಿಸಿಸಿಐ ತೆಗೆದು ಹಾಕಿದೆ. ರಾಹುಲ್ ಕಳಪೆ ಪ್ರದರ್ಶನವೇ ಇದಕ್ಕೆ ಕಾರಣವಾಗಿದ್ದು, ತಂಡದಲ್ಲಿ ರಾಹುಲ್ ಆಡುವುದೇ ಅನುಮಾನ ಎಂಬ ಸುದ್ದಿಗಳಿದ್ದವು. ಆದರೆ ರಾಹುಲ್ ಅವರನ್ನು ಉತ್ತಮ ಪ್ರತಿಭೆ ಇರುವ ಆಟಗಾರ ಎಂದು ರವಿ ಶಾಸ್ತ್ರಿ ಹೊಗಳಿದ್ದಾರೆ. ಇದೇ ವೇಳೆ ಒಂದಷ್ಟು ಸಲಹೆಗಳನ್ನೂ ನೀಡಿದ್ದಾರೆ.
ಟೀಂ ಇಂಡಿಯಾದಲ್ಲಿ ಸಾಕಷ್ಟು ಪ್ರತಿಭಾವಂತರಿದ್ದಾರೆ. ರಾಹುಲ್ ಸ್ಥಾನದ ಬಗ್ಗೆ ಮಾತನಾಡುವುದಿಲ್ಲ. ಅವರೊಬ್ಬ ಉತ್ತಮ ಆಟಗಾರ. ಆದರೆ ಆಟಗಾರನಲ್ಲಿ ಸ್ಥಿರತೆ ಕಾಯ್ದುಕೊಂಡರೆ ಉತ್ತಮ ಪ್ರದರ್ಶನ ಸಾಧ್ಯವಾಗುತ್ತದೆ ಎಂದು ಶಾಸ್ತ್ರಿ ಪ್ರತಿಪಾದಿಸಿದ್ದಾರೆ.